ಹ್ಯಾಕರ್ ಶ್ರೀಕಿಗೂ - ಸಿದ್ದರಾಮಯ್ಯ ಪುತ್ರಗೂ ನಂಟು?: ಹಳೆಯ ಪೋಟೋ ಕೆದಕಿದ ಬಿಜೆಪಿ; ಕಾಂಗ್ರೆಸ್​ನಿಂದ ನೀರವ್-ಮೋದಿ ಫೋಟೋ ಬಿಡುಗಡೆ

Siddu Shreeki
Published on

ಬೆಂಗಳೂರು: ಬಿಟ್ ಕಾಯಿನ್ ವಿಷಯದಲ್ಲಿ ಹಗರಣವಾಗಿದೆ ಎಂಬುದಕ್ಕೆ ಸೂಕ್ತ ದಾಖಲೆ ಪತ್ತೆಯಾಗದೇ ಅನುಮಾನಗಳ ಮೇಲೆಯೇ ನಡೆಯುತ್ತಿರುವ ಟೀಕೆ ಟಿಪ್ಪಣಿ ಈಗ ಮತ್ತೊಂದು ಹೆಜ್ಜೆ ಮುಂದುವರಿದಿದೆ. ಬಿಜೆಪಿಯು ಹ್ಯಾಕರ್ ಶ್ರೀಕಿ ಜತೆ ಸಿದ್ದರಾಮಯ್ಯ ಪುತ್ರ ರಾಕೇಶ್ ಇರುವ ಫೋಟೋವನ್ನು ಬಿಡುಗಡೆ ಮಾಡಿದ್ದರೆ, ಸಿದ್ದರಾಮಯ್ಯ ಪ್ರಧಾನಿ ಮೋದಿ ನೀರವ್ ಮೋದಿ ಜತೆ ಇರುವ ಫೋಟೋ ಬಿಡುಗಡೆ ಮಾಡಿ ಜಾಲತಾಣದಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಬಿಟ್ ಕಾಯಿನ್ ಪ್ರಕರಣ ಮುಚ್ಚಿಹಾಕುತ್ತಿಲ್ಲ. ಸರ್ಕಾರ ಈ ಪ್ರಕರಣದಲ್ಲಿ ಯಾರೊಬ್ಬರನ್ನೂ ರಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ನಾಯಕರಲ್ಲಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಅನವಶ್ಯಕ ಆರೋಪ ಮಾಡುವುದು ಬೇಡ.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ

ಬಿಜೆಪಿ ಪ್ರಶ್ನೆ ಏನು?

  1. ಮಾನ್ಯ ಸಿದ್ದರಾಮಯ್ಯ ಅವರೇ, ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್​ಕಾಯಿನ್ ಹಗರಣದ ಬಗ್ಗೆ ತಾವು ಪ್ರಸ್ತಾಪಿಸಿದ್ದೀರಿ. ಈಗ ನಮಗೆ ಒಂದಿಷ್ಟು ಪ್ರಶ್ನೆಗಳಿವೆ. ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಉತ್ತರಿಸಿ.
  2. ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಜತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ!? ಸುನೀಶ್ ಹೆಗ್ಡೆ ಹೇಮಂತ್ ಯಾರ ಜತೆಗಿದ್ದಾರೆ ಎಂದು ಒಮ್ಮೆ ನೋಡಿ.
  3. ಚಿತ್ರದಲ್ಲಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ ಬಿಟ್​ಕಾಯಿನ್ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು.
  4. ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಅವ್ಯವಹಾರ ಬಹಿರಂಗವಾಗಿದ್ದು ನಿಮ್ಮ ಕಾಲದಲ್ಲಿ. ಒಂದೆರಡು ಕಡೆ ದಾಳಿ ನಡೆದರೂ ತನಿಖೆ ಹಠಾತ್ ಸ್ಥಗಿತಗೊಂಡಿತು.
  5. ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಶ್ರೀಕಿಯಂಥವರು ಆಗ ನಿಮ್ಮ ಮನೆಯ ಸುತ್ತಮುತ್ತಲೂ ಓಡಾಡಿರಲೂ ಬಹುದಲ್ಲವೇ!? ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣ ಮುಚ್ಚಿ ಹಾಕುವುದು ನಿಮಗೆ ಅನಿವಾರ್ಯವಾಗಿತ್ತು.
  6. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಆದರೆ ಈಗ ದಾಖಲೆಯೇ ಇಲ್ಲ ಎನ್ನುತ್ತಿದ್ದಾರೆ. ಬಿಟ್ ಕಾಯಿನ್ ಪ್ರಭಾ ವಲಯ ನಿಮ್ಮನ್ನೇ ಸುತ್ತಿಕೊಳ್ಳಬಹುದೆಂಬ ಭಯ ಕಾಡುತ್ತಿದೆಯೇ?

ಸಿದ್ದರಾಮಯ್ಯ ಪ್ರತಿಟೀಕೆ

  1. ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿಯು ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಎಳೆದು ತಂದಿದೆ. ಸರಿ, ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುವೆ.
  2. ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು ಅತ್ಯಂತ ವೈಯಕ್ತಿಕ ಮತ್ತು ಕ್ಷುಲಕತನದ ರಾಜಕಾರಣ.
  3. ರಾಕೇಶ್ ಜತೆಗೆ ಬಿಟ್​ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ್ ಶೃಂಗ ಸಭೆಯಲ್ಲಿ ಪ್ರಧಾನಿ ಜತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು?
  4. ಶ್ರೀಕೃಷ್ಣನ ಜತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜತೆ ಬಿಜೆಪಿ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು, ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ.
  5. ನನ್ನ ಕೈಯಲ್ಲಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ. ಸರ್ಕಾರವೇ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ.
  6. ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ? ಯಾಕೆ ಸರತಿ ಸಾಲಲ್ಲಿ ನಿಂತು ಹೆಗಲು ಮುಟ್ಟಿ ನೋಡಿಕೊಂಡು ಸರ್ಕಾರ ತಪು್ಪ ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು ಎಂದು ಎದೆ ಬಡಿದು ಕೊಳ್ಳುತ್ತಿದ್ದಾರೆ?
  7. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ. ಪುರಾವೆಗಳಿಲ್ಲದೆ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲ ಕಚ್ಚಲಿದೆಯೋ ಗೊತ್ತಿಲ್ಲ.

ಗೃಹ ಸಚಿವ ಆರಗ ಜ್ಞಾನೇಂದ್ರ ಒಬ್ಬ ಹುಚ್ಚ. ಅವರನ್ನು ನಿಮ್ಹಾನ್ಸ್​ಗೆ ದಾಖಲಿಸಬೇಕಿದೆ. ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿಗೆ ದೂರು ಹೋಗಿದೆ. ಅದರಲ್ಲಿ ಸಿಎಂ ಕುಟುಂಬದ ಸದಸ್ಯರು, ಹಲವು ಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ಸಂಸತ್ ಸದಸ್ಯರು ಸೇರಿ ಹಲವರ ಹೆಸ ರಿವೆ.

| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಡಿ.ಕೆ.ಶಿವಕುಮಾರ್ ಅವರನ್ನು ನಿಮ್ಹಾನ್ಸ್​ಗೆ ಸೇರಿಸಿದರೂ ಪ್ರಯೋಜನವಿಲ್ಲ. ಅವರು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಸತ್ಯ ಯಾವಾಗಲೂ ಕಹಿ. ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

| ಆರಗ ಜ್ಞಾನೇಂದ್ರ ಗೃಹ ಸಚಿವ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಬಿಟ್ ಕಾಯಿನ್ ವಿಷಯದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಜನರ ಮುಂದೆ ಬೆತ್ತಲಾಗಿದೆ. ಶ್ರೀಕಿಯನ್ನು ಪುಕ್ಕಟೆಯಾಗಿ ಬಿಟ್ಟಿದ್ದರಿಂದ ಈ ಅಪರಾಧ ಪ್ರಕರಣ ನಡೆಯಲು ಕಾರಣವಾಗಿದೆ.

| ಪಿ.ರಾಜೀವ್ ಶಾಸಕ ಬಿಜೆಪಿ ವಕ್ತಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net