

ಚೀನಾದಲ್ಲಿ ಹುಟ್ಟಿದ ಕರೊನಾ ವೈರಸ್ ಹೆಚ್ಚೆಚ್ಚು ಹರಡುತ್ತಿರುವ ಬೆನ್ನಲ್ಲೇ ಚೀನಾ ಬಗ್ಗೆಯೂ ಅನುಮಾನ ಅಧಿಕವಾಗುತ್ತದೆ. ಅಮೆರಿಕ ಅಂತೂ ಚೀನಾಕ್ಕೆ ಬೆಂಬಿಡದೆ ಕಾಡುತ್ತಿದೆ.
ಮತ್ತೇನಲ್ಲ, ಕರೊನಾ ವೈರಸ್ನ್ನು ಚೀನಾ ಬೇಕಂತಲೇ ಸೃಷ್ಟಿಸಿ ಜಗತ್ತಿಗೆ ಹಬ್ಬಿಸಿದೆ. ಇದು ಚೀನಾದ ಪಿತೂರಿ ಎಂಬುದು ಆರೋಪ. ಹಾಗೇ ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲೂ ಚೀನಾ ಮುಚ್ಚುಮರೆ ಮಾಡಿದೆ ಎಂದು ಹೇಳಲಾಗುತ್ತಿದೆ. ಮೊನ್ನೆಯವರೆಗೂ ಒಂದು ಸಾವಿನ ಲೆಕ್ಕ ಕೊಟ್ಟಿದ್ದ ಚೀನಾ ಈಗ ಏಕಾಏಕಿ ಸಾವಿನ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು ಸಂಶಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ನವೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಹರಡಿದ ಕರೊನಾ ವೈರಸ್ ಇದೀಗ ಇಡೀ ಜಗತ್ತನ್ನು ಆವರಿಸಿದೆ. ಜನರ ಜೀವನ ಏರುಪೇರಾಗಿದೆ. ಆರ್ಥಿಕತೆಯೂ ತಳಕಂಡಿದೆ.
ಈಗಾಗಲೇ ಹಲವು ದೇಶಗಳು ಚೀನಾ ವಿರುದ್ಧ ತಿರುಗಿಬಿದ್ದಿವೆ. ಅದರಲ್ಲೂ ಕರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲೇ ಹುಟ್ಟಿದ್ದು. ಇದೊಂದು ಚೀನಾ ಸೃಷ್ಟಿ ಎಂದು ಕೆಲವು ಅಧ್ಯಯನಗಳ ವರದಿ ಹೇಳಿದ ಮೇಲಂತೂ ಅಮೆರಿಕ ಸೇರಿ ಹಲವು ದೇಶಗಳು ಚೀನಾದೆಡೆಗೆ ಅನುಮಾನವನ್ನು ಹೆಚ್ಚಿಸಿಕೊಂಡಿವೆ.
ಈಗ ಇದೇ ವಿಚಾರದ ಬಗ್ಗೆ ಅಮೆರಿಕದ ಕ್ಯಾನ್ಸರ್ ತಜ್ಞ, ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಲೇಖಕ ಸಿದ್ಧಾರ್ಥ್ ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾದ ಪ್ರಯೋಗಾಲಯದಲ್ಲಿ ಕರೊನಾ ವೈರಸ್ ಸೃಷ್ಟಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದೊಂದು ಅಸಂಭವ ಕಾರ್ಯ. ವೈರಸ್ಗಳ ಒಂದು ವಿಧವಾಗಿರುವ ಕೊರನಾ ವೈರಸ್ ಕಾಣಿಸಿಕೊಂಡಿದ್ದು ಬಾವಲಿಗಳಲ್ಲಿ. ಚೀನಾದ ಲ್ಯಾಬ್ನಲ್ಲಿ ಕರೊನಾ ವೈರಸ್ ಸೃಷ್ಟಿಸಲಾಗಿದೆ ಎಂಬ ವರದಿಯನ್ನು ನಾನು ನಂಬುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಒಳಸಂಚಿನ ಸಿದ್ಧಾಂತಗಳು ಹಲವು ಇರಬಹುದು. ಆದರೆ ಕರೊನಾ ವೈರಸ್ ಸೃಷ್ಟಿಸಿದ್ದಲ್ಲ. ಅದು ಸಾಧ್ಯವಿಲ್ಲ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.
ಕರೊನಾ ವೈರಸ್ ಬಗ್ಗೆ ಅನೇಕ ಸಂಶೋಧಕರು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಕೆಲವು ಸಂಗತಿಗಳು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಮೊದಲ ಕರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿದ್ದು ಚೀನಾದ ವುಹಾನ್ನಲ್ಲಿ 2019ರ ಡಿಸೆಂಬರ್ 31ರಂದು. ಆದರೆ ಇದಕ್ಕು ಮೊದಲೇ ವುಹಾನ್ನಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಚೀನಾ ಬೇಕೆಂದೇ ಮುಚ್ಚಿಟ್ಟಿತ್ತು ಎಂದು ಹೇಳಲಾಗಿದೆ. (ಏಜೆನ್ಸೀಸ್)