

Madhya Pradesh: ವಿಪರೀತ ಫೋನ್ ಗೀಳಿಗೆ ಸಿಲುಕಿದ್ದ ಮಗಳಿಗೆ ಗದರಿ, ಮೊಬೈಲ್ ಕಸಿದುಕೊಂಡಿದ್ದೇ ಆಕೆಯ ಸಾವಿಗೆ ಕಾರಣವಾಯ್ತು ಎಂಬ ಸಂಗತಿ ನೆನೆದು ಹೆತ್ತವರು ಕಣ್ಣೀರಿಟ್ಟಿದ್ದಾರೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ಬಾಲಕಿಯನ್ನು (11) ದೀಪಿಕಾ ಧ್ರುವೆ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ವರದಿಯಾಗಿದೆ.
ತಾಯಿ ಬೈದು, ಮೊಬೈಲ್ ಫೋನ್ ಕಸಿದುಕೊಂಡರು ಎಂಬ ಕಾರಣಕ್ಕೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ. ದಿನಗೂಲಿ ಕಾರ್ಮಿಕರಾದ ದೀಪಿಕಾಳ ತಂದೆ ಅಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಗಳ ಜತೆ ಆಕೆಯ ತಾಯಿ ಮತ್ತು ಸಹೋದರಿ ಕೂಡ ಮನೆಯಲ್ಲೇ ಇದ್ದರು. ಮೊಬೈಲ್ನೊಳಗೆ ಮುಳುಗಿ ಹೋಗಿದ್ದ ಮಗಳಿಗೆ ಗದರಿ, ಫೋನ್ ಕಸಿದುಕೊಂಡ ನಂತರ ಆಕೆಯ ತಾಯಿ ಮನೆಯ ಹೊರಗೆ ಕುಳಿತಿದ್ದರು. ಈ ಸಮಯದಲ್ಲಿ ದೀಪಿಕಾಳ ಸಹೋದರಿ ಸ್ನಾನ ಮುಗಿಸಿ, ರೂಮ್ಗೆ ಬಂದು ನೋಡಿದಾಗ ದೀಪಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾಳೆ.
ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಆಕೆಯ ಕೆಲವು ಸಮಯಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. "ಮಗಳು ಅತಿಯಾಗಿ ಮೊಬೈಲ್ ಬಳಸುತ್ತಿದ್ದರಿಂದ ಆತಂಕಗೊಂಡು ಆಕೆಯ ತಾಯಿ ಫೋನ್ ಕಿತ್ತುಕೊಂಡಿದ್ದರು. ಇದರಿಂದ ಮನನೊಂದ ದೀಪಿಕಾ ನೇಣು ಬಿಗಿದುಕೊಂಡಿದ್ದಾಳೆ" ಎಂದು ಕುಂದೀಪುರ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಬಾಗೆಲ್ ಹೇಳಿದ್ದಾರೆ,(ಏಜೆನ್ಸೀಸ್).