ಬೇಕಾಬಿಟ್ಟಿ ಪಿಐಎಲ್ ಸಲ್ಲಿಸುವವರಿಗೆ ಹೈಕೋರ್ಟ್ ಎಚ್ಚರಿಕೆ

highcourt
Published on

ಪವಿತ್ರಾ ಕುಂದಾಪುರ ಬೆಂಗಳೂರು

ಸ್ಮಾರಕವನ್ನು, ಘನತ್ಯಾಜ್ಯ ಘಟಕವನ್ನು ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಲು, ರಸ್ತೆ ನಿರ್ಮಾಣದ ಕುರಿತು ಮಾರ್ಗದರ್ಶನ ನ್ಯಾಯಾಲಯದ ಕೆಲಸವಲ್ಲ...ಸಾರ್ವಜನಿಕ ಹಿತಾಸಕ್ತಿಯ ಹೆಸರಲ್ಲಿ ಪಿಐಎಲ್‌ಗಳನ್ನು ಸಲ್ಲಿಸುವ ಅರ್ಜಿದಾರರಿಗೆ ಹೈಕೋರ್ಟ್ ಎಚ್ಚರಿಕೆ ಕೊಟ್ಟ ಪರಿ ಇದು.

ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಮಂಜೂರಾದ ಜಮೀನು ರದ್ದುಗೊಳಿಸುವಂತೆ ಮನವಿ ಮಾಡಿರುವ ಅರ್ಜಿಯೂ ಪ್ರಚಾರ ಆಧಾರಿತವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅರ್ಜಿ ಸಲ್ಲಿಸಿ ಸಾರ್ವಜನಿಕ ಹಿತಾಸಕ್ತಿ ಎಂದರೆ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿಯ ದೊಡ್ಡೇರಿ ಗ್ರಾಮದ ಸರ್ವೇ ನಂ.77ರಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಪ್ರಕರಣ ಸಂಬಂಧ ಗಿಲ್ಕಾ ನಾಯಕ್ ಮತ್ತಿತರರು ಸಲ್ಲಿಸಿದ ಪಿಐಎಲ್ ಅನ್ನು ಸಿಜೆ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ದೊಡ್ಡೇರಿ ಗ್ರಾಮದಲ್ಲಿ ಘನತಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಬೇರೆ ಜಾಗದಲ್ಲಿ ಘಟಕ ನಿರ್ಮಿಸುವುದಾಗಿ ಆದೇಶಿಸಿತ್ತು ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಅಲ್ಲದೆ, ಇದೀಗ ಸೂಚಿಸಲಾಗಿರುವ ಜಾಗದಲ್ಲಿ ಅನೇಕ ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ಅದೇ ಜಾಗದಲ್ಲಿ ಸಣ್ಣ ಕೆರೆಯಿದ್ದು, ಸ್ಥಳೀಯರು ಕೃಷಿ ಚುಟುವಟಿಕೆಗೆ ಹಾಗೂ ಗ್ರಾಮದ ಸಾಕುಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಆ ಭಾಗದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಮುಂದುವರಿದರೆ ಅದನ್ನೇ ಅವಲಂಬಿಸಿರುವ ಜೀವ ಸಮೂಹಕ್ಕೆ ತೊಂದರೆಯಾಗಲಿದೆ. ಇದನ್ನು ಪರಿಗಣಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಹೈಕೋರ್ಟ್ ಹೇಳಿದ್ದೇನು?

* ಅರ್ಜಿದಾರರು ತಮ್ಮನ್ನು ತಾವು ಕೆಚ್ಚೆದೆಯ ನಾಗರಿಕರೆಂದು ಬಿಂಬಿಸಿಕೊಂಡು ಪಿಐಎಲ್ ಸಲ್ಲಿಸಿದ್ದಾರೆ

* ಸ್ಮಾರಕ, ಘನತ್ಯಾಜ್ಯ ಘಟಕ ವರ್ಗಾಯಿಸಲು, ರಸ್ತೆ ನಿರ್ಮಾಣ, ಮಾರ್ಗದರ್ಶನ ಕೋರ್ಟ್ ಕೆಲಸವಲ್ಲ

* ಸ್ಥಳೀಯರು ಸಲ್ಲಿಸಿರುವ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಬದಲಿಗೆ ಪ್ರಚಾರ ಆಧಾರಿತವಾಗಿದೆ

* ಇಂತಹ ಅರ್ಜಿ ಸಲ್ಲಿಸಿ ಸಾರ್ವಜನಿಕ ಹಿತಾಸಕ್ತಿ ಎಂದರೆ ದಂಡ ವಿಧಿಸಬೇಕಾಗುತ್ತದೆ

ಪ್ರಕರಣವೇನು?

ಬೆಂಗಳೂರು ದಕ್ಷಿಣ ತಾಲೂಕು ದೊಡ್ಡೇರಿ ಗ್ರಾಮದ ಸ.ನಂ. 77 ತ್ಯಾಜ್ಯ ವಿಂಗಡಣೆಗೆ ಜಮೀನು ಮಂಜೂರು ಮಾಡಿದೆ. ಈ ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ಇಲ್ಲಿನ ಸುತ್ತಲಿನ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಅಂದಾಜು 1/2 ಕಿ.ಮೀ. ದೂರದಲ್ಲಿ ಪಟಾಲಮ್ಮ, ಶನಿಮಹಾತ್ಮ ಹಾಗೂ ಮುತ್ತುರಾಯಸ್ವಾಮಿ ದೇವಸ್ಥಾನವಿದ್ದು, ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ.

ಆದ್ದರಿಂದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಲಿವಾರದ ಸ.ನಂ. 60ರಲ್ಲಿ ಜಮೀನು ಸೂಕ್ತವಾಗಿದೆ. ಆದರೆ ಈಗ ಉದ್ದೇಶಪೂರ್ವಕವಾಗಿ ಸೂಲಿವಾರ ಗ್ರಾಮದ ಜಮೀನನ್ನು ರದ್ದುಪಡಿಸಿ ದೊಡ್ಡೇರಿ ಗ್ರಾಮದ ಸ.ನಂ.77ರ ಜಮೀನು ಮಂಜೂರು ಮಾಡಲು ಕೋರಿರುತ್ತಾರೆ. ಸೂಲಿವಾರ ಗ್ರಾಮದ ಸ.ನಂ. 60ರಲ್ಲಿ ಈಗಾಗಲೇ ಮಂಜೂರು ಆಗಿರುವ ಜಮೀನನ್ನು ಮುಂದುವರಿಸಿ ದೊಡ್ಡೇರಿ ಸ.ನಂ.77ರಲ್ಲಿ ಗುರುತಿಸಿರುವ ಜಮೀನನ್ನು ಕೈಬಿಡಬೇಕೆಂದು ಕೋರಿ 40 ಗ್ರಾಮಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net