

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕೆಟ್ಟ ದುರಾಡಳಿ ನಡೆಯುತ್ತಿದ್ದು, ಎಲ್ಲ ರಂಗದಲ್ಲೂ ವಿಲವಾಗಿದೆ. ಜನ ಸಾಮಾನ್ಯರು, ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಈ ಪರಿಸ್ಥಿತಿ ನೋಡಿದಾಗ ಸರ್ಕಾರದ ವಿರುದ್ದ ಸಮರ ಸಾರಬೇಕಾಗಿರುವ ಬಿಜೆಪಿ ಆಂತರಿಕವಾಗಿ ಭಿನ್ನಾಭಿಪ್ರಾಯದ ಮಾತಿನ ಸಮರ ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ದೇಶಕ್ಕೆ ಸಮರ್ಥ ಆಡಳಿತ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಈ ಪಕ್ಷ ಮತ್ತು ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಹಲವಾರು ಮುಖಂಡರಲ್ಲಿ ನಾನೂ ಒಬ್ಬ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಆದುದರಿಂದ ನಾನು ಯಾವುದೇ ಒಂದು ಗುಂಪಿನ ಸಭೆಯನ್ನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಎರಡೂ ಕಡೆಯವರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಬಿಜೆಪಿಯ ಸರ್ವೋಚ್ಚ ನಾಯಕ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಒಟ್ಟಿಗೆ ಕುಳಿತು ಮಾತುಕತೆಯ ಮೂಲಕ ಇದನ್ನು ಬಗೆ ಹರಿಸಬೇಕು. ಇಲ್ಲದಿದ್ದರೆ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಬೇಕು ಎಂದು ಸಲಹೆ ನೀಡಿದ್ದಾರೆ.
ಪಕ್ಷದ ವರಿಷ್ಠರು ಕೂಡಲೇ ಕರ್ನಾಟಕದ ಪಕ್ಷದ ಬೆಳವಣಿಗೆಯ ಬಗ್ಗೆ ಗಮನವನ್ನು ಹರಿಸಿ, ಎಲ್ಲ ಪ್ರಮುಖರ ಜತೆಗೆ ಚರ್ಚೆ ಮಾಡಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.