ಸಂಪಾದಕೀಯ | ಯಾವ ಪುರುಷಾರ್ಥಕ್ಕೆ ಯುದ್ಧ?

ವಿಜಯವಾಣಿ (2)
Published on

ರಷ್ಯಾ ಮತ್ತು ಯೂಕ್ರೇನ್ ನಡುವೆ 2022ರ ಫೆಬ್ರವರಿ 24ರಂದು ಆರಂಭವಾದ ಸಮರ ಮೂರು ವರ್ಷಗಳನ್ನು ಪೂರೈಸಿ, ನಾಲ್ಕನೇ ವರ್ಷಕ್ಕೆ ಪ್ರವೇಶಿಸಿದೆ. ಈ ಮೂರು ವರ್ಷಗಳಲ್ಲಿ ಆಗಿರುವ ಜೀವಹಾನಿ, ವಿತ್ತಹಾನಿಯ ಪ್ರಮಾಣ ಗಾಬರಿ ಮೂಡಿಸುವಂಥದ್ದು. ಯುದ್ಧದಿಂದ ಏನನ್ನೂ ಸಾಧಿಸಲಾಗದು. ಆದರೆ, ಅದು ಸೃಷ್ಟಿಸುವ ಸಾವು-ನೋವು, ವಿತ್ತೀಯ ಹಾನಿ, ತಂದೊಡ್ಡುವ ಸಂಕಷ್ಟಗಳು ಮಾತ್ರ ಅಪಾರ. ಇವುಗಳ ಪರಿಣಾಮವೂ ದೀರ್ಘಕಾಲದವರೆಗೆ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಈ ವಾಸ್ತವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅಥವಾ ವಿಶ್ವದ ಬಲಾಢ್ಯ ರಾಷ್ಟ್ರಗಳಿಗೆ ಗೊತ್ತಿಲ್ಲ ಅಂತೇನಲ್ಲ. ಆದರೂ, ಪ್ರತಿಷ್ಠೆ, ಜಿದ್ದಾಜಿದ್ದಿ, ಸ್ವಹಿತಾಸಕ್ತಿ ಮತ್ತು ಅಹಂಕಾರದ ತಾಕಲಾಟಕ್ಕೆ ಯುದ್ಧವನ್ನು ಸಾರಿ, ಜನಸಾಮಾನ್ಯರ ಪ್ರಾಣವನ್ನು ಬಲಿ ಪಡೆಯುವ ಕೃತ್ಯ ಖಂಡಿತವಾಗಿಯೂ ಒಪ್ಪುವಂಥದ್ದಲ್ಲ.

ಯುದ್ಧ ಸಾರಿದ ಆರಂಭಿಕ ಹಂತದಲ್ಲೇ ಗೆಲುವು ಸಾಧಿಸುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ರಷ್ಯಾಗೆ ಯೂಕ್ರೇನ್ ಭಾರಿ ಪ್ರತಿರೋಧವನ್ನು ಒಡ್ಡಿತು. ಇದರಿಂದ ರಷ್ಯಾ ಮತ್ತಷ್ಟು ಕೆರಳಿ, ಸಮರ ತೀವ್ರಗೊಳಿಸಿತು. ಸೋಮವಾರ ವಿಡಿಯೋ ಹಂಚಿಕೊಂಡಿರುವ ಯೂಕ್ರೇನ್ ಅಧ್ಯಕ್ಷ ಝುಲೆನಸ್ಕಿ ‘ನಮ್ಮ ಪ್ರತಿರೋಧಕ್ಕೆ ಮೂರು ವರ್ಷ. ನಮ್ಮ ವೀರತ್ವಕ್ಕೆ ಮೂರು ವರ್ಷ. ನಮ್ಮ ಕೃತಜ್ಞತೆಗೆ ಮೂರು ವರ್ಷ... ಯೂಕ್ರೇನಿಗನಾಗಿ ಹೆಮ್ಮೆ ಪಡುತ್ತೇನೆ’ ಎಂದಿದ್ದಾರೆ. ವರ್ಷಗಟ್ಟಲೇ ಯುದ್ಧ ನಡೆದರೂ, ಸಾವಿರಾರು ಜನರು, ಸೈನಿಕರು ಬಲಿಯಾದರೂ ರಷ್ಯಾ ಹಾಗೂ ಯೂಕ್ರೇನ್ ಈ ಸಮರ ನಿಲ್ಲಿಸುವ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ವಿಪರ್ಯಾಸ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯವಾಗಿ ಬಲಾಢ್ಯವಾಗಿರುವ ರಾಷ್ಟ್ರಗಳು ಕೂಡ ಯುದ್ಧ ನಿಲ್ಲಿಸುವ ಪ್ರಯತ್ನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿಲ್ಲ.

ಹೀಗಾಗಿ, ರಷ್ಯಾ ಮತ್ತು ಯೂಕ್ರೇನ್ ದೇಶಗಳು ಪರಸ್ಪರ ದೂಷಿಸುತ್ತ ನಾಲ್ಕನೇ ವರ್ಷದಲ್ಲೂ ಸಮರ ಮುಂದುವರಿಸಿವೆ. ದೊಡ್ಡ ರಾಷ್ಟ್ರಗಳ ಪೈಕಿ ಕೆಲವು ರಷ್ಯಾ ಪರ, ಮತ್ತೆ ಕೆಲವು ಯೂಕ್ರೇನ್ ಪರ ವಹಿಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿವೆ. ಈಗ ಅಮೆರಿಕದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ‘ಯುದ್ಧ ನಿಲ್ಲಿಸುತ್ತೇನೆ’ ಎಂದು ಪ್ರಚಾರದ ಸಂದರ್ಭದಲ್ಲಿ ಅಬ್ಬರಿಸಿದ್ದ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾರೆ. ಆ ಆಶ್ವಾಸನೆ ಮತ್ತು ಹೊಣೆಗಾರಿಕೆಯನ್ನು ಅವರು ಮರೆಯಬಾರದು. ಅಮೆರಿಕ ಕೂಡಲೇ ಮಧ್ಯಪ್ರವೇಶ ಮಾಡಿ ಯುದ್ಧವನ್ನು ಕೊನೆಗೊಳಿಸಬೇಕು. ರಷ್ಯಾ ಮತ್ತು ಯೂಕ್ರೇನ್ ಸಹ ಶಾಂತಿಸ್ಥಾಪನೆಗೆ ಮುಂದಾಗಬೇಕು.

ಜಾಗತಿಕವಾಗಿ ಭಯೋತ್ಪಾದನೆ, ಬಡತನ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮತ್ತು ಈ ಪಿಡುಗುಗಳ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸುವ ಅಗತ್ಯವಿದೆ. ಕಾಲದ ಈ ಅಗತ್ಯವನ್ನು ಮನಗಾಣದೆ ಜೀವಹಾನಿಯಲ್ಲಿ ತೊಡಗುವ ಸಮರಗಳಿಂದ ನಷ್ಟ, ದುಃಖದ ಹೊರತಾಗಿ ಬೇರೇನೂ ದಕ್ಕುವುದಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ, ಅಂತಾರಾಷ್ಟ್ರೀಯ ವಲಯ ಇನ್ನಾದರೂ ಎಚ್ಚೆತ್ತುಕೊಂಡು, ವಾಸ್ತವದೊಂದಿಗೆ ಮುಖಾಮುಖಿಯಾಗಿ ಯುದ್ಧವನ್ನು ನಿಲ್ಲಿಸಲು ಪೂರ್ಣಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಯುದ್ಧಗಳು ವರ್ಷಗಟ್ಟಲೇ ಮುಂದುವರಿಯುತ್ತಿವೆ ಎನ್ನುವುದೇ ಮನುಕುಲದ ಪಾಲಿಗೆ ತೀವ್ರ ಆತಂಕದ ವಿಷಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net