ವಕ್ಫ್ ವಿರುದ್ಧ ಸಿಡಿದೆದ್ದ ಬಿಜೆಪಿ

4Anand1
ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಪ್ರಕರಣ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಮುರಗೇಶ ನಿರಾಣಿ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸುಭಾಷ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಸಾರ್ವಜನಿಕರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಪ್ರಕರಣ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ರಾಣಿ ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಪಹಣಿ ಪತ್ರದಲ್ಲಿ ದಾಖಲು ಮಾಡುವ ಮೂಲಕ ಆಸ್ತಿ ಕಬಳಿಸುವ ಪ್ರಯತ್ನ ಮಾಡುತ್ತಿದೆ. ವಕ್ಫ್ ಬೋರ್ಡ್ ಖೊಟ್ಟಿ ದಾಖಲೆಗಳ ಸಷ್ಟಿಸಿರುವ ಬಗ್ಗೆ ಇಡಿಯಿಂದ ತನಿಖೆ ಆಗಬೇಕು. 50 ವರ್ಷಗಳ ಹಳೆಯ ವಕ್ಫ್ ಗೆಜೆಟ್ ಅಧಿಸೂಚನೆ ಹಿಂಪಡೆದು, ರಾಜ್ಯ ವಕ್ಫ್ ಮಂಡಳಿಯಲ್ಲಿ ನಡೆದಿರುವ ಬಹತ್ ದಾಖಲೆಗಳ ವ್ಯವಹಾರ ಸಿಬಿಐ ತನಿಖೆಗೆ ವಹಿಸಬೇಕು. ರಾಜ್ಯದಲ್ಲಿ ಸಾರ್ವಜನಿಕರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಬರೀ ನೋಟಿಸ್ ವಾಪಸ್ ಪಡೆದರೆ ಸಾಲದು ರೈತರ ಜಮೀನಿನಲ್ಲಿ ಸ್ಪಷ್ಟವಾಗಿ ರೈತರ ಹೆಸರು ನೋಂದಣಿ ಆಗಬೇಕು. 1974ರ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆಯನ್ನೂ ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ಪರ ಬಿಜೆಪಿ ಹೋರಾಟ: ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ರಾಜ್ಯದಲ್ಲಿನ ರೈತರ ಆಸ್ತಿಗಳನ್ನು ಕಬಳಿಸುವ ಕೆಲಸ ರಾಜ್ಯ ಕಾಂಗ್ರೆಸ್‌ನಿಂದ ನಡೆಯುತ್ತಿದೆ. ಸಚಿವ ಜಮೀರ್ ಅಹ್ಮದ್ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. 1974 ವಕ್ಫ್ ಬೋರ್ಡ್ ಕಾಯ್ದೆಗೆ ಕೇಂದ್ರ ಬಿಜೆಪಿ ಸರ್ಕಾರ ತಿದ್ದುಪಡೆಯ ಮೂಲಕ ರೈತರ ಜಮೀನು ಉಳಿಸುವ ಕಾರ್ಯಕ್ಕೆ ಮುಂದಾಗಿದೆ. ರೈತರ ಪರವಾಗಿ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸಿಎಂ ಸಿದ್ದರಾಮಯ್ಯ ತುಘಲಕ ರೀತಿ ಆಡಳಿತ ನಡೆಸುತ್ತಿದ್ದಾರೆ. ಸಚಿವ ಜಮೀರ ಅಹ್ಮದ್‌ಖಾನ್ ಜಿಲ್ಲಾಧಿಕಾರಿ ಕಚೇರಿಗಳಿಗೆ ಭೇಟಿ ಅಧಿಕಾರಿಗಳಿಗೆ ಒತ್ತಡ ಹಾಕಿ ವಕ್ಫ್ ಬೋರ್ಡ್ ಹೆಸರು ನಮೂದಿಸುವ ಮೂಲಕ ಸಾರ್ವಜನಿಕರ ಆಸ್ತಿಗಳನ್ನು ಕಬಳಿಸಲು ಮುಂದಾಗಿದ್ದಾರೆ. ವಕ್ಫ್ ಆಸ್ತಿ ಎಂದು ರೈತರಿಗೆ ನೀಡಲಾಗಿರುವ ನೋಟಿಸ್ ಹಿಂಪಡೆಯುವಂತೆ ಮತ್ತು ಪಹಣಿಯಲ್ಲಿ ತಿದ್ದುಪಡಿ ಮಾಡಿರುವುದನ್ನು ರದ್ದು ಪಡೆಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿರುವುದನ್ನು ಕಾರ್ಯ ರೂಪಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ, ಅನಿಲ ಬೆನಕೆ, ಮುರೇಂದ್ರಗೌಡ ಪಾಟೀಲ, ಗೀತಾ ಸುತಾರ, ಸೋನಾಲಿ ಸರ್ನೋಬತ್, ರೇಷ್ಮಾ ಪಾಟೀಲ, ಅಜಿತ್ ಹಲಕರ್ಣಿ, ಧನಂಜಯ ಜಾಧವ, ಹನುಮಂತ ಕೊಂಗಾಳಿ, ಯಲ್ಲೇಶ ಕೋಲಕಾರ, ಮಹಾಂತೇಶ ಚಿನ್ನಪ್ಪಗೌಡರ, ಸತೀಶ ಅಪ್ಪಾಜಿಗೋಳ ಇತರರಿದ್ದರು.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಹಿಂದು ದೇವಾಲಯಗಳು, ರೈತರ ಮತ್ತು ಮಠಗಳ ಆಸ್ತಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಲಾಗಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಹಗರಣಗಳೆ ರಾಜ್ಯ ಸರ್ಕಾರದ ಸಾಧನೆಯಾಗಿದೆ. | ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net