

ಬೆಂಗಳೂರು: ತಲತಲಾಂತರದಿಂದ ಉಳುಮೆ ಮಾಡಿಕೊಂಡ ಬಂದಿರುವ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿತವಾಗಿದೆ. ಚಿಂತಾಕ್ರಾಂತರಾಗಿರುವ ಅಮಾಯಕ ರೈತರ ನೆರವಿಗಾಗಿ ನ.4ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ.
ಪಕ್ಷದ ಹಾಲಿ, ಮಾಜಿ ಸಂಸದ-ಶಾಸಕರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕುರಿತು ಬುಧವಾರ ಪತ್ರ ಬರೆದು, ಹೋರಾಟದ ಅನಿವಾರ್ಯತೆ ವಿವರಿಸಿದ್ದಾರೆ.
ನೊಂದ ರೈತರನ್ನು ಒಳಗೊಂಡು ಆಯಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಮುಂದೆ ನ.4ರಂದು ಪ್ರತಿಭಟನೆ ನಡೆಸಿ, ಸಚಿವ ಜಮೀರ್ ಅಹ್ಮದ್ ಖಾನ್‌ರನ್ನು ಸಚಿವ ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು.
ಈಗಾಗಲೇ ಅಕ್ರಮವಾಗಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿ ಪತ್ರಗಳನ್ನು ಹಿಂಪಡೆಯಬೇಕು ಎಂದು ಈ ಹೋರಾಟದ ಮೂಲಕ ಒತ್ತಾಯಿಸಲಾಗುತ್ತದೆ.
ಯಾವುದೇ ರೈತರ ಆಸ್ತಿ ಕಬಳಿಸುವ ಹುನ್ನಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಸಂಬಂಧಿತ ಅಧಿಕಾರಿಗಳ ಮುಖೇನ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಪ್ರತಿಭಟನೆ ನಡೆಸಲು ಹಾಲಿ-ಮಾಜಿ ಸಂಸದ-ಶಾಸಕರಿಗೆ ಬಿ.ವೈ.ವಿಜಯೇಂದ್ರ ವಿನಂತಿಸಿದ್ದಾರೆ.
ವಕ್ಫ್ ಆಸ್ತಿ ಎಂದು ನಮೂದಿಸುವ ಮೂಲಕ ರಾಜ್ಯಾದ್ಯಂತ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ಶಿವಮೊಗ್ಗ ಸೇರಿ ಹಲವಾರು ಜಿಲ್ಲೆಗಳ ರೈತರ ಆಕ್ರೋಶ ಭುಗಿಲೆದ್ದಿದೆ.
ಈ ಸಂದರ್ಭದಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ರೈತರು ಪರ ನಿಂತು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಮುಖ್ಯಮಂತ್ರಿ ಸೂಚನೆಯಂತೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಎಲ್ಲ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ.
ಇದರಿಂದಾಗಿ ರಾಜ್ಯದ ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿ ಎಂದು ಪಹಣಿಯಲ್ಲಿ ನಮೂದಿಸಿರುವ ಕಾರಣ ಆತಂಕ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಹತ್ವದ ದಾಖಲೆಗಳ ಪ್ರತಿ ಸಹಿತ ವಿಸ್ತೃತ ಸಂದೇಶ ಹಂಚಿಕೊಂಡಿದ್ದಾರೆ. ಈ ದಾಖಲೆ ಪ್ರಕಾರ ಸಿಎಂ ಸಿದ್ದರಾಮಯ್ಯ ಸೂಚನೆ ಪ್ರಕಾರ ವಕ್ಫ್ ಆಸ್ತಿಗಳೆಂದು ದಾಖಲಿಸಿ, ವಶಕ್ಕೆ ಪಡೆಯಲಾಗುತ್ತಿದೆ ಎನ್ನುವ ಅಂಶದತ್ತ ಬೆಳಕು ಚೆಲ್ಲಿದ್ದಾರೆ.
ವಿಜಯಪುರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ 8-9-2024ರಂದು ನಡೆದ ವಕ್ಫ್ ಆಸ್ತಿಗಳ ಪ್ರಗತಿ ಪರಿಶೀಲನಾ ಸಭೆ ನಡವಳಿಯಿದಾಗಿದೆ. ಮುಖ್ಯಮಂತ್ರಿ ಸೂಚನೆಯಂತೆ ವಕ್ಫ್ ಆಸ್ತಿಗಳ ಪ್ರಗತಿ ಪರಿಶೀಲನೆ, ವಕ್ಫ್ ಅದಾಲತ್ ಮಾಡಲಾಗುತ್ತಿದೆ.
ಈಗಾಗಲೇ ತಿಳಿಸಿರುವಂತೆ ಅಧಿಕಾರಿಗಳು ತಾವು ಹೇಳಿದಂತೆ ಕಾರ್ಯ ಮಾಡಬೇಕಾಗುತ್ತದೆ. ಇಲ್ಲದೆ ಇದ್ದಲ್ಲಿ ಅಂತಹವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಈವರೆಗಿನ ಆಡಳಿತದಲ್ಲಿ ಸಂಕಷ್ಟಿತ ರೈತರಿಗೆ ಯಾವುದೇ ಪರಿಹಾರವನ್ನೂ ನೀಡಲಿಲ್ಲ. ರೈತರ ಕಲ್ಯಾಣಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನು ಕೊಡಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ವಿಜಯಪುರ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೊರಟಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಸ್ವತಃ ಸಿಎಂ ನಿರ್ದೇಶನ ನೀಡಿರುವುದನ್ನು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭಾ ನಡಾವಳಿಯಲ್ಲಿ ಉಲ್ಲೇಖವಾಗಿದೆ. ಅಲ್ಪಸಂಖ್ಯಾತರ ಅಮಲು ಏರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಬಂಟ ಸಚಿವ ಜಮೀರ್ ಅಹ್ಮದ್ ಖಾನ್ ಮೂಲಕ ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಬುದುಕಿಗೆ ಕೊಳ್ಳಿ ಇಡಲು ಹೊರಟಿದ್ದಾರೆ.
ಕರ್ನಾಟಕದ ಸದ್ಯದ ಬೆಳವಣಿಗೆಯನ್ನು ನೋಡಿದರೆ ‘ಅಲ್ಲಾವುದ್ದೀನ್ ಖಿಲ್ಜಿ- ಮಲ್ಲಿಕಾೂರ್ ಜೋಡಿಯ ಕರಾಳ ಇತಿಹಾಸ ನೆನಪಿಸಿಕೊಳ್ಳುವಂತಾಗಿದೆ. ಖಿಲ್ಜಿಯ ಆದೇಶದ ಮೇರೆಗೆ ಮಲ್ಲಿಕಾೂರ್ ದಕ್ಷಿಣ ಕರ್ನಾಟಕದವರೆಗೆ ನಡೆಸಿದ ದುರಾಕ್ರಮಣ ನೆನಪಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಅಟ್ಟಹಾಸ ಹಿಮ್ಮೆಟ್ಟಿಸಲು ರಾಜ್ಯದ ಮಣ್ಣಿನ ಮಕ್ಕಳು ಸಂಕಲ್ಪ ತೊಡುವುದು ಅನಿವಾರ್ಯವಾಗಿದೆ. ರಾಜ್ಯ ಬಿಜೆಪಿಯು ಮಣ್ಣಿನ ಮಕ್ಕಳ ಪರವಾಗಿ ದನಿಯೆತ್ತಿ ನಿಲ್ಲಲಿದೆ ಎಂದೂ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.