

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಹಬ್ಬಿರುವ ವಕ್ಫ್ ಜಾಗದ ವಿವಾದದ ಕಿಚ್ಚು ಚಿಂತಾಮಣಿಯಲ್ಲೂ ಸಂಘರ್ಷಕ್ಕೆ ಕಾರಣವಾಗಿದ್ದು ರೈತರು ಮತ್ತು ಜಾಮೀಯಾ ಮಸೀದಿ ಗುಂಪಿನ ನಡುವೆ ಮಾತಿನ ಚಕಮಕಿ ಹಿನ್ನೆಲೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಕೊನೆಗೆ ಪೊಲೀಸ್ ಲಾಠಿಜಾರ್ಜ್ನೊಂದಿಗೆ ತಾತ್ಕಾಲಿಕ ಶಮನ ಕಂಡಿದೆ.
ಚಿಂತಾಮಣಿ ನಗರದ 31 ನೇ ವಾರ್ಡಿನ ತಿಮ್ಮಸಂದ್ರದ ಸರ್ವೆ ನಂ 13 ರ 2.19 ಗುಂಟೆ ಮತ್ತು ಸರ್ವೆ ನಂ.20ರ 2 ಎಕರೆ ಜಮೀನು ವಿವಾದಿತ ಜಾಗ. ಜಾಮೀಯಾ ಮಸೀದಿ ಪದಾಧಿಕಾರಿಗಳು ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಾಮಫಲಕ ಅಳವಡಿಸಿದರೆ, ಮತ್ತೊಂದು ರೈತರ ಗುಂಪು ಬೋರ್ಡುಗಳನ್ನು ಕಿತ್ತು ಉಳುಮೆಗೆ ಮುಂದಾಗಿದೆ.ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆದು, ಗಲಾಟೆಯು ಹಂತಕ್ಕೆ ಹೋಗಿದ್ದು ಪೊಲೀಸರು ಸಕಾಲಕ್ಕೆ ಮಧ್ಯೆ ಪ್ರವೇಶಿಸಿ ಜಾಗದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಸೂಚಿಸಿದ್ದಾರೆ. ಹಾಗೆಯೇ ಉಳುಮೆಯ ಟ್ರಾಕ್ಟರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
*ಪೊಲೀಸರ ಮಧ್ಯೆ ಪ್ರವೇಶ
ಹಿಂದೆ ಚಿಂತಾಮಣಿ ನಗರದ ದೊಡ್ಡಪೇಟೆಯ ಜಾಮೀಯಾ ಮಸೀದಿ ಕಮಿಟಿಯ ಪದಾಧಿಕಾರಿಗಳು ಜಮೀನನ್ನು ಸರ್ವೆ, ಹದ್ದುಬಸ್ತು ಮಾಡಿಸಿ, ಜಮೀನಿನ ಸುತ್ತಲೂ ಕಲ್ಲಿನ ಕೂಚಗಳು, ಮುಳ್ಳು ತಂತಿಯ ಬೇಲಿ, ವಕ್ಪ್ ಆಸ್ತಿ ಎಂಬ ಬೋರ್ಡು ಹಾಕಿಸಿದ್ದು ಇದರ ನಡುವೆ ಮೊದಲಿನಿಂದಲೂ ವಿವಾದಿತ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ 31ನೇ ವಾರ್ಡಿನ ನಾಗೇಶ್, ಶ್ರೀರಾಮರೆಡ್ಡಿ ಕುಟುಂಬದವರು ಗುರುವಾರ ತಂತಿ ಬೇಲಿಯನ್ನು ಕಿತ್ತು ಹಾಕಿದ್ದಾರೆ. ಇದರಿಂದ ಗಲಾಟೆಯಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಮುರಳೀಧರ್, ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಠಿಕಾಣಿ ಹೂಡಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ. ತಹಸೀಲ್ದಾರ್ ಸುದರ್ಶನ್ ಯಾದವ್ ಜಮೀನು ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದ್ದಾರೆ.
*ಜಿಲ್ಲೆಯಲ್ಲಿ ವಿವಾದಿತ ಪ್ರಕರಣಗಳು
ವಕ್ಫ್ ಜಾಗದ ವಿವಾದ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿಂದೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟೂರಿಗೆ ಸಮೀಪದಲ್ಲಿರುವ ಕಂದವಾರದಲ್ಲಿ ಸರ್ಕಾರಿ ಶಾಲೆಯನ್ನು ವಕ್ಫ್ ಜಾಗ ಎಂದೇಳಲಾಗಿತ್ತು. ಕೊನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಹಣಿಯಲ್ಲಿ ತಿದ್ದುಪಡಿ ಮಾಡಿ, ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ. ಇನ್ನು ಶಿಡ್ಲಘಟ್ಟ ತಾಲೂಕಿನಲ್ಲಿ ಬೆಳ್ಳೂಟಿ ಆಂಜನೇಯಸ್ವಾಮಿ ದೇವಾಲಯ ಜಾಗವನ್ನು ವಕ್ಫ್ ಸೇರಿದ್ದು ಎಂಬುದಾಗಿ ಹೇಳುತ್ತಿರುವುದು ವಿವಾದ ಸೃಷ್ಟಿಸಿದೆ. ಇದೀಗ ಚಿಂತಾಮಣಿಯ ತಿಮ್ಮಸಂದ್ರದಲ್ಲಿ ರೈತರು ಮತ್ತು ಜಾಮೀಯಾ ಮಸೀದಿ ಪದಾಧಿಕಾರಿಗಳ ನಡುವೆ ಗಲಾಟೆ ಪ್ರಕರಣ ವರದಿಯಾಗಿದೆ.