ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ ಅಭಿಯಾನ: ಪ್ರಿಯಾಂಕ್ ಖರ್ಗೆ ಟೀಕೆ| Waqf campaign

priyankh
Published on

ಬೆಂಗಳೂರು: ಬಿಜೆಪಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ ಅಭಿಯಾನ(Waqf campaign to keep BJP alive) ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಹೋರಾಟ ಮಾಡಲು ಯಾರೂ ಬೇಡ ಅಂದಿದ್ದಾರೆ. ವಿಪಕ್ಷದಲ್ಲಿ ಇದ್ದು ಇನ್ನೇನು ಕೆಲಸ ಇದೆ. ಜನರ ಸಮಸ್ಯೆ ಬಗೆಹರಿಸಲು ಅವರಿಂದ ಆಗಲಿಲ್ಲ ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ವಕ್ಫ್ ಆಸ್ತಿಗೆ ಜಿಯೋ ಮ್ಯಾಪಿಂಗ್ ಮಾಡಲು ಹಣ ಕೊಟ್ಟಿಲ್ಲವೆ? ವಕ್ಫ್ ಆಸ್ತಿ ಉಳಿಸುತ್ತೇವೆ ಅಂತ ಹೇಳಿರುವುದು ಸುಳ್ಳೆ? ಬಿಜೆಪಿ ಅವರು ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಉಳಿಸುತ್ತೇವೆ ಎಂದು ಹೇಳಿಲ್ಲವೆ? ಮೊದಲು ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಅವಧಿಯಲ್ಲಿ ವಕ್ಫ್ ಬೋರ್ಡ್ ಮುಚ್ಚಿದ್ರಾ? ಅವರು ಎಷ್ಟು ದೇವಾಲಯ ರಕ್ಷಣೆ ಮಾಡಿದ್ದಾರೆ ಹೇಳಲಿ. ನಾನು ಬೇಕಾದರೆ ಅಂಕಿ-ಅಂಶ ಕೊಡುತ್ತೇನೆ. ಬಿಜೆಪಿ ಅವರಿಗೆ ನಾವು ಕೇಳೋ ಪ್ರಶ್ನೆಗೆ ಬಿಟ್ಟು ಉಳಿದದಕ್ಕೆ ಉತ್ತರ ಕೊಡುತ್ತಾರೆ. ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

40 ಪರ್ಸೆಂಟ್ ಆರೋಪದ ಒಂದು ಪ್ರಕರಣದಲ್ಲಿ ಬಿಜೆಪಿಗೆ ಕ್ಲೀನ್‌ಚಿಟ್ ಬಂದಿರಬಹುದು. ನ್ಯಾ. ನಾಗಮೋಹನ್ ದಾಸ್ ಕಮಿಟಿ ವರದಿ ಬರಬೇಕಿದೆ. ಕೋವಿಡ್ ಬಗ್ಗೆ ಆರೋಪ ಸಾಬೀತಾಗುತ್ತಿದೆ.

ಕರೋನಾ ಹಗರಣ ಆಗಿಲ್ಲ ಅಂದರು. ಈಗ ನ್ಯೂಸ್ ಆಗುತ್ತಿದೆ. ಬಿಜೆಪಿಗೆ ಜೈಲಿಗೆ ಹೋಗಲು ಯಾಕಿಷ್ಟು ಅರ್ಜೆಂಟ್ ಎಂದು ವ್ಯಂಗ್ಯವಾಡಿದರು.

ವಕ್ಫ್ ವಿರುದ್ಧದ ಅಭಿಯಾನ ವಿಚಾರದಲ್ಲಿ ಬಿಜೆಪಿ ಎರಡು ಬಣ ಆಗಿದೆ. ಯತ್ನಾಳ್, ಜಾರಕಿಹೊಳಿ ಬಣ ನಮ್ಮದೇ ನಿಜವಾದ ಬಿಜೆಪಿ ಎನ್ನುತ್ತಾರೆ. ವಿಜಯೇಂದ್ರ ಇನ್ನೊಂದು ಮಾಡಿದ್ದಾರೆ ಅದು ನಿಜವಾದ ಬಿಜೆಪಿ ಅಂತೆ. ಬಿಜೆಪಿ ತಂಡಗಳಿಗೆ ಅಪ್ಪ-ಅಮ್ಮ ಇಲ್ಲ ಅಂತ ಅವರೇ ಹೇಳುತ್ತಿದ್ದಾರೆ.

ಬಿಜೆಪಿ ತಬ್ಬಲಿ ಆಗಿದೆ ಅಂತಲೂ ಅವರೇ ಹೇಳುತ್ತಿದ್ದಾರೆ. ಅವರ ರೋಷ ಬರೀ ಸಿದ್ದರಾಮಯ್ಯ, ಡಿಕೆಶಿ, ನಮ್ಮ ಮೇಲೆ ಮಾತ್ರ. ಹಾದಿ-ಬೀದಿಯಲ್ಲಿ ನೀನು ಭ್ರಷ್ಟ, ನಿಮ್ಮಪ್ಪ ಭ್ರಷ್ಟ ಅಂತ ಓಡಾಡುತ್ತಿದ್ದಾರೆ. ವೇದಿಕೆ ಹತ್ತಿದರೆ ಮುಜುಗರ ಆಗುತ್ತೆ ಎಂದು ಹೇಳುತ್ತಿದ್ದಾರೆ. ಈ ಪಕ್ಷಕ್ಕೆ ಅಪ್ಪ, ಅಮ್ಮ ಇಲ್ಲ. ದುಬೈಗೆ ಏಕೆ ಹೋಗುತ್ತಾರೆ? ಮಾರಿಷಸ್ ಏಕೆ ಹೋಗುತ್ತಾರೆ? ಮನಿ ಲಾಂಡರಿಂಗ್ ಆಕ್ಟ್‌ನಲ್ಲಿ ಏಕೆ ನಿಮ್ಮ ಹೆಸರಿದೆ ಎಂದು ಮಾತನಾಡುತ್ತಿದ್ದಾರೆ. ಮೊದಲು ಅದನ್ನು ನಿಯಂತ್ರಣ ಮಾಡಲಿ. ಆಮೇಲೆ ಕಾಂಗ್ರೆಸ್ ಬಗ್ಗೆ ಮಾತಾಡಲಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಯಾರಿಗೂ ಕೂಡ ವಯಕ್ತಿಕ ನಿಂದನೆ ಮಾಡುವ ಅಧಿಕಾರವಿಲ್ಲ. ಇದನ್ನು ಸಿಎಂ, ಡಿಸಿಎಂ ಕೂಡ ಹೇಳಿದ್ದಾರೆ. ಆದರೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಖರ್ಗೆಯವರು ಸುಟ್ಟಂತೆ ಕಾಣುತ್ತಾರೆ ಅಂದರು. ಚರ್ಮ ಸುಟ್ಟು ಬ್ಲ್ಯಾಕ್ ಆಗಿದೆ ಅಂದರು. ಆಗ ಬಿಜೆಪಿ, ಜೆಡಿಎಸ್‌ನವರು ಯಾರಾದ್ರೂ ಮಾತಾಡಿದ್ರಾ? ಆದರೂ ಬಣ್ಣದ ಬಗ್ಗೆ ಯಾರೂ ಕೂಡ ಮಾತಾಡಬಾರದು.

-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net