ವಕ್ಫ್, ರೈತ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್‌ಗೆ ಶಾಪ ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ|Anti-Hindu attitudes curse Congress

B Y Vijayendra
Published on

ಬೆಂಗಳೂರು: ವಕ್ಫ್ ವಿಚಾರ, ರೈತ ಹಾಗೂ ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್‌ಗೆ ಶಾಪವಾಗಲಿದೆ. ಮೂರೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಬಿಜೆಪಿ ಗೆದ್ದಾಗಿದೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಚನ್ನಪಟ್ಟಣ, ಸಂಡೂರಿನಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಸಿಎಂ ಇದ್ದರು. ಆದರೆ ಈಗ ಚನ್ನಪಟ್ಟಣ ಕೈಜಾರಿ ಹೋಗುತ್ತಿದೆ ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಾಗಿದೆ. ಸಂಡೂರು, ಚನ್ನಪಟ್ಟಣದಲ್ಲಿ ಬಿಜೆಪಿ ಕೈ ಮೇಲಾಗುತ್ತಿರುವುದು ಗೊತ್ತಾಗಿಯೇ ಖುದ್ದು ಸಿಎಂ ಸಿದ್ದರಾಮಯ್ಯ ಸಂಡೂರು ಕಡೆ ಗಮನ ಕೊಟ್ಟಿದ್ದಾರೆ ಎಂದು ಟಾಂಗ್ ಕೊಟ್ಟರು.

ಸಿಎಂ ರಾಜೀನಾಮೆ ನಿಶ್ಚಯವಾಗಿದೆ

ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ತಾವೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಶಾಸಕರಿಗೆ ವಿಶ್ವಾಸ ತುಂಬಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸತ್ಯ ಏನು ಎಂಬುದು ಸಿಎಂಗೆ ಗೊತ್ತಿದೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ಎಂಬುದು ಡಿಕೆಶಿ, ಖರ್ಗೆಯವರಿಗೆ ಗೊತ್ತಿದೆ. ಮುಖ್ಯಮಂತ್ರಿಗಳ ರಾಜೀನಾಮೆ ಈಗಾಗಲೇ ನಿಶ್ಚಯ ಆಗಿದೆ. ಹಾಗಾಗಿ ಕೆಲ ಸಮುದಾಯಗಳ ಮತ ಕೀಳಲು ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.

ದಬ್ಬಾಳಿಕೆ ನಾವು ಸಹಿಸುವುದಿಲ್ಲ

ತಗ್ಗಿ ಬಗ್ಗಿ ನಡೆಯಬೇಕು ಎನ್ನುವ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಅಧಿಕಾರದ ದರ್ಪ ಅವರಿಗೆ ಈ ರೀತಿ ಮಾತಾಡಿಸಿದೆ. ಜಯನಗರದ ಜನ ಏನು ತಪ್ಪು ಮಾಡಿದ್ದಾರೆ? ಅಲ್ಲಿ ನಮ್ಮ ಶಾಸಕರು ಇದ್ದಾರೆ ಎನ್ನುವ ಕಾರಣಕ್ಕೆ ತಗ್ಗಿ ಬಗ್ಗಿ ನಡೀಬೇಕಾ? ನಾವೇನು ಪ್ರಜಾಪ್ರಭುತ್ವದಲ್ಲಿ ಇದ್ದೀವೋ? ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೀವೋ? ಶಾಸಕರಿಗಷ್ಟೇ ಅಲ್ಲ ಕ್ಷೇತ್ರದ ಮತದಾರರಿಗೂ ಡಿಕೆಶಿ ಅವಮಾನ ಮಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ಡಿಕೆಶಿ ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇರಲಿ. ಪ್ರತಿಪಕ್ಷ ಶಾಸಕರ ಮೇಲೆ ದಬ್ಬಾಳಿಕೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಡಿಕೆಶಿ ಈ ರೀತಿಯ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು.

ಮಣ್ಣು ತಿನ್ನುವ ಕೆಲಸ ಏಕೆ ಬೇಕಿತ್ತು?

ವಕ್ಫ್ ನೊಟೀಸ್ ವಾಪಸ್ ಪಡೆದಿರುವ ಬಗ್ಗೆ ಕಂದಾಯ ಆಯುಕ್ತಾಲಯದಿಂದ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಮಣ್ಣು ತಿನ್ನುವ ಕೆಲಸಕ್ಕೆ ಯಾಕೆ ಕಾಂಗ್ರೆಸ್ ಕೈ ಹಾಕಬೇಕಿತ್ತು?

ರೈತರ ಆಸ್ತಿ ಕಬಳಿಸಲು ಜಮೀರ್ ಅಹಮದ್‌ಗೆ ಯಾಕೆ ಸಿಎಂ ಗುತ್ತಿಗೆ ಕೊಡಬೇಕಾಗಿತ್ತು? ಎಂದು ಆಡಳಿತ ನಡೆಸುತ್ತಿರುವ ಸರ್ಕಾರ ರೈತರ ಜೀವನಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net