ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

03_HSN_02 Shreyas Patel
ಶ್ರೇಯಸ್ ಪಟೇಲ್
Published on

ಹಾಸನ: ತೀವ್ರ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಅಂಗೀಕಾರ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಖಂಡಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಚರ್ಚೆಯಲ್ಲಿ ಬಹುತೇಕರು ವಿರೋಧ ವ್ಯಕ್ತಪಡಿಸಿದರು. ಆದರೂ ಮಧ್ಯರಾತ್ರಿ ಅಂಗೀಕಾರ ಮಾಡಲಾಗಿದೆ. ಈ ಮೂಲಕ ಸಂವಿಧಾನದ ಕಲಂ 25, 26 ಹಾಗೂ 30ಅನ್ನು ಗಾಳಿಗೆ ತೂರಲಾಗಿದೆ ಎಂದು ಕಿಡಿ ಕಾರಿದರು. ಈ ಮೂಲಕ ಒಂದು ಸಮಾಜವನ್ನು ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ಎಷ್ಟೊಂದು ಟಾರ್ಗೆಟ್ ಮಾಡಿವೆ. ಶೋಷಣೆ ಮಾಡಿ ಕಿರುಕುಳ ನೀಡುತ್ತಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮುಸಲ್ಮಾನರು ಇವರಿಗೆ ಏನು ತೊಂದರೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ಸಂಸದರು ದಿನಪೂರ್ತಿ ಸಂಸತ್‌ನಲ್ಲಿ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದರು. ಅದಕ್ಕೆ ಕ್ಯಾರೇ ಎನ್ನದೆ ತಡರಾತ್ರಿ 1.30ರ ಸುಮಾರಾಗಿ ಮಸೂದೆ ಅಂಗೀಕರಿಸಲಾಗಿದೆ. ಕೇಂದ್ರ ಸರ್ಕಾರದ ಹಠಮಾರಿತನ ಧೋರಣೆಗೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳೆಂದು ದೇಶದ ಜನರನ್ನು ಒಡೆದು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಎನ್‌ಡಿಎ ಸರ್ಕಾರದ ಕುತಂತ್ರ ನೀತಿಯನ್ನು ದೇಶ ಹಾಗೂ ಕರ್ನಾಟಕದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ ಭಾರತ. ಎಲ್ಲ ಸಮುದಾಯದವರು ತಲೆತಲಾಂತರಗಳಿಂದ ಒಂದೇ ಎಂಬ ಭಾವನೆಯಲ್ಲಿ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ಅದನ್ನು ಸಹಿಸದ ಕೇಂದ್ರ ಸರ್ಕಾರ ದ್ವೇಷ ಬಿತ್ತುತ್ತಿದೆ ಎಂದು ದೂರಿದರು. ಹಠಕ್ಕೆ ಬಿದ್ದು ಮಸೂದೆ ಅಂಗೀಕಾರ ಮಾಡಿರುವವರು ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.

ಎಲ್ಲವನ್ನೂ ದೇಶದ ಜನ ಗಮನಿಸುತ್ತಿದ್ದಾರೆ. ಇದೊಂದು ಕರಾಳ ದಿನ. ಈ ದೇಶದಲ್ಲಿ ನೆಲೆಸಿರುವ ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಆದರೆ ರಾಜಕೀಯ ಕಾರಣದಿಂದ ಆಳುವವರೇ ಬೇಧ-ಭಾವ ಮಾಡುತ್ತಿರುವುದು ಖಂಡನೀಯ. ನಾನು ಈ ದೇಶದ ಒಬ್ಬ ನಾಗರಿಕನಾಗಿ ಈ ಕಾಯ್ದೆಯನ್ನು ವಿರೋಧಿಸುವೆ ಎಂದ ಅವರು, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲು ಹೊರಟಿದೆ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net