

Pakistan : ಕಾಶ್ಮೀರ, ಭಯೋತ್ಪಾದನೆ, ನೀರು ಹಂಚಿಕೆ ಮತ್ತು ವ್ಯಾಪಾರ ಸೇರಿದಂತೆ ಎರಡು ನೆರೆಯ ರಾಷ್ಟ್ರಗಳ ನಡುವೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಶಾಂತಿಯುತವಾಗಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಬಯಕೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ, ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಕಾರ್ಯಾಚರಣೆಯ ಬಳಿಕ ಗಡಿಯಾಚೆಗೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸುಮಾರು ಒಂದು ವಾರಗಳ ಕಾಲ ಎರಡೂ ರಾಷ್ಟ್ರಗಳ ನಡುವೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದವು. ಇದರಲ್ಲಿ ಭಾರತ ಮೇಲುಗೈ ಸಾಧಿಸುತ್ತಿದ್ದಂತೆ ಭಯದಿಂದ ತತ್ತರಿಸಿದ ಪಾಕಿಸ್ತಾನ, ಕದನ ವಿರಾಮಕ್ಕಾಗಿ ಮನವಿ ಮಾಡಿತು. ಬಳಿಕ ಉಭಯ ದೇಶಗಳು ಕದನ ವಿರಾಮ ಘೋಷಣೆ ಮಾಡಿದವು. ಇದಾದ ಕೆಲವೇ ದಿನಗಳಲ್ಲಿ ಷರೀಫ್ ಅವರು ಶಾಂತಿಯ ಜಪ ಮಾಡುತ್ತಿದ್ದಾರೆ. ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಸಂದರ್ಭದಲ್ಲಿ ಟೆಹ್ರಾನ್‌ನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ಕಾಶ್ಮೀರ ಮತ್ತು ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲು ನಾವು ಬಯಸುತ್ತೇವೆ ಮತ್ತು ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ನಮ್ಮ ನೆರೆಹೊರೆಯವರೊಂದಿಗೆ ಮಾತನಾಡಲು ಸಹ ಸಿದ್ಧರಿದ್ದೇವೆ ಎಂದು ಶೆಹಬಾಜ್ ಷರೀಫ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ, ಭಾರತ ಯುದ್ಧದ ಮಾರ್ಗವನ್ನು ಆರಿಸಿಕೊಂಡರೆ ಪಾಕಿಸ್ತಾನವು ಅದಕ್ಕೆ ಪ್ರತಿಕ್ರಿಯಿಸುತ್ತದೆ. ಅವರು ಆಕ್ರಮಣಕಾರರಾಗಿ ಉಳಿಯಲು ಆರಿಸಿಕೊಂಡರೆ, ನಾವು ಕೆಲವು ದಿನಗಳ ಹಿಂದೆ ಮಾಡಿದಂತೆ ನಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುತ್ತೇವೆ. ಅವರು ನಮ್ಮ ಶಾಂತಿಯ ಪ್ರಸ್ತಾಪವನ್ನು ಒಪ್ಪಿಕೊಂಡರೆ, ನಾವು ನಿಜವಾಗಿಯೂ ಶಾಂತಿಯನ್ನು ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಬಯಸುತ್ತೇವೆ ಎಂದು ಷರೀಫ್ ಹೇಳಿದರು.
ಈ ತಿಂಗಳ ಆರಂಭದಲ್ಲಿ ಭಾರತ ನಡೆಸಿದ ನಿಖರವಾದ ಮಿಲಿಟರಿ ದಾಳಿಗಳ ನಂತರ, ಭಾರತ ಸರ್ಕಾರದ ಜತೆ ಮಾತುಕತೆ ನಡೆಸಲು ಪಾಕ್ ಸರ್ಕಾರ ಬಯಸಿದೆ. ಆದಾಗ್ಯೂ, ಪಾಕಿಸ್ತಾನದ ಜತೆ ನಡೆಯುವ ಯಾವುದೇ ಮಾತುಕತೆ ಕೇಲ ಪಾಕ್ ಆಕ್ರಮಿತ ಕಾಶ್ಮೀರದ ಮರಳುವಿಕೆ ಮತ್ತು ಭಯೋತ್ಪಾದನೆಯ ವಿಷಯಕ್ಕೆ ಸೀಮಿತವಾಗಿರುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಒಂದೇ ಒಂದು ವಿಷಯ ಬಾಕಿ ಉಳಿದಿದೆ. ಅದೇನೆಂದರೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮರಳುವಿಕೆ. ಇದನ್ನು ಬಿಟ್ಟು ಮಾತನಾಡಲು ಬೇರೆ ಏನೂ ಇಲ್ಲ. ಭಯೋತ್ಪಾದಕರನ್ನು ಅವರಿಗೆ ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಕೂಡ ಮಾತನಾಡಬಹುದು. ಉಳಿದಂತೆ ನಮಗೆ ಬೇರೆ ಯಾವುದೇ ವಿಷಯದ ಉದ್ದೇಶವಿಲ್ಲ ಎಂದು ಸರ್ಕಾರಿ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪ್ರಸ್ತಾಪಕ್ಕೆ ಈಗಾಗಲೇ ಸ್ಪಷ್ಟನೆ ನೀಡಿರುವ ಭಾರತ, ಉಭಯ ದೇಶಗಳ ನಡುವಿನ ಯಾವುದೇ ಮಾತುಕತೆ ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ದ್ವಿಪಕ್ಷೀಯ ವಿಷಯವಾಗಿಯೇ ಉಳಿಯಬೇಕು ಎಂದಿದೆ. (ಏಜೆನ್ಸೀಸ್)