Jitan Manjhi | ಬಿಹಾರ ಚುನಾವಣೆ; 25 ಟಿಕೆಟ್​ ಬೇಕು ಎಂದು ಎನ್​​ಡಿಎ ಮುಂದೆ ಡಿಮ್ಯಾಂಡ್​ ಇಟ್ಟ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ

Jitan Manjhi
Published on

Jitan Manjhi: ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 20 ರಿಂದ 25 ಸ್ಥಾನಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ

ದರ್ಭಾಂಗದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಾಂಝಿ, ನಮ್ಮ ಪಕ್ಷದಲ್ಲಿ ಈಗ ಕೇವಲ ನಾಲ್ಕು ಶಾಸಕರು ಮಾತ್ರ ಇದ್ದು, ವಿಧಾನಸಭೆಯಲ್ಲಿ ನಮ್ಮ ಪರವಾದ ಧ್ವನಿ ಬಲವಾಗಿ ಕೇಳಿಬರಲು ನಮಗೆ ಕನಿಷ್ಟ 20 ರಿಂದ 25 ಶಾಸಕರು ಬೇಕು ಎಂದರು.

ಇದೇ ವೇಳೆ ತಮ್ಮ ಪಕ್ಷದ ಪ್ರಣಾಳಿಕೆಯ ಕುರಿತು ಮಾತನಾಡಿದ ಮಾಂಝಿ, ರಾಜ್ಯದಲ್ಲಿ ತಮ್ಮ ಪಕ್ಷದ ಬಲ ಹೆಚ್ಚಾದರೆ, ಕಾಲೇಜು ಹಂತದವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಾಮಾಜಿಕ ಭದ್ರತಾ ಪಿಂಚಣಿಯನ್ನು 1,100 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸುವುದು ಮತ್ತು ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.

ಬಿಹಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳು ಸೀಟು ಹಂಚಿಕೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಂಝಿ ಈ ಹೇಳಿಕೆಯನ್ನು ನೀಡಿದ್ದು, ಅನೇಕ ಸಣ್ಣ ಪುಟ್ಟ ಪಕ್ಷಗಳ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಲು ಯೋಚಿಸುವಾಗ, ಮಾಂಝಿ ತಮ್ಮ ಆಕಾಂಕ್ಷೆಗಳನ್ನು ತಿಳಿಸಲು ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ನಾಯಕ, ತಮ್ಮ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಆದರೆ ಕೆಲವು ಜನರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಮೂಲಕ ಹಗಲು ಹೊತ್ತಿನಲ್ಲಿಯೂ ನೋಡಲು ಸಾಧ್ಯವಾಗದ ಹಕ್ಕಿಗೆ ಹೋಲಿಸಿ, ತಪ್ಪು ಸೂರ್ಯನದ್ದಲ್ಲ ಎಂದರು.

ಒಂದು ಕಾಲದಲ್ಲಿ ಲಾಲು ಪ್ರಸಾದ್ ಯಾದವ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಸಂದರ್ಭ ನೆನೆದ ಮಾಂಝಿ. ಲಾಲು ಆಳ್ವಿಕೆಯಲ್ಲಿ ಅಪರಾಧಿಗಳು ಅಪರಾಧಗಳನ್ನು ಮಾಡಿದ ನಂತರ ಮುಖ್ಯಮಂತ್ರಿಯ ನಿವಾಸವನ್ನು ತಲುಪುತ್ತಿದ್ದರು ಮತ್ತು ಅಲ್ಲಿಯೇ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಲಾಲು ಸ್ವತಃ ಈ ಜನರಿಗೆ ಏನಾದರೂ ಕೊಡಿ ಎಂದು ಹೇಳುತ್ತಿದ್ದರು ಎಂದು ಆರೋಪಿಸಿದರು. ಪ್ರಸ್ತುತ ನಿತೀಶ್ ಕುಮಾರ್ ಮನೆ ಕಡೆ ಬರುವ ಪ್ರಯತ್ನ ಮಾಡುವುದಿಲ್ಲ. ರಾಜ್ಯಾದ್ಯಂತ ರಸ್ತೆಗಳು ಮತ್ತು ವಿದ್ಯುತ್ ಸರಬರಾಜು ಸುಧಾರಣೆಗೆ ಮುಖ್ಯಮಂತ್ರಿಯನ್ನು ಶ್ಲಾಘಿಸಿದರು.

ಜೆಡಿಯುದಿಂದ ಹೊರಬಂದ ಮಾಂಝಿ, 2015 ರಲ್ಲಿ HAM ಅನ್ನು ಸ್ಥಾಪಿಸಿದರು, ಆ ವರ್ಷದ ಬಿಹಾರ ವಿಧಾನಸಭಾ ಚುನಾವಣೆಗೆ NDA ಜೊತೆ ಮೈತ್ರಿ ಮಾಡಿಕೊಂಡ ಮಾಂಝಿ ಪಕ್ಷ, ಹೇಳಿಕೊಳ್ಳುವ ರೀತಿಯಲ್ಲಿ ಸಾಧನೆ ಮಾಡಲಿಲ್ಲ, 2020 ರ ಚುನಾವಣೆಗೆ ಮುಂಚಿತವಾಗಿ ಮಹಾಘಟಬಂಧನ್ ಕಡೆಗೆ ತಿರುಗಿದರು, ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು.

ಹಿಂದಿನ ಚುನಾವಣೆಯ ಫಲಿತಾಂಶ..

2020 ರ ವಿಧಾನಸಭಾ ಚುನಾವಣೆಯಲ್ಲಿ, ಜೆಡಿ(ಯು), ಬಿಜೆಪಿ, ಎಚ್‌ಎಎಂ ಮತ್ತು ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಒಳಗೊಂಡ ಎನ್‌ಡಿಎ 243 ಸ್ಥಾನಗಳಲ್ಲಿ 125 ಸ್ಥಾನಗಳನ್ನು ಗೆದ್ದು, ಅಲ್ಪ ಬಹುಮತವನ್ನು ಗಳಿಸಿತು. ಬಿಜೆಪಿ 74 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಜೆಡಿ(ಯು) 43, ಎಚ್‌ಎಎಂ(ಎಸ್) 4 ಮತ್ತು ವಿಐಪಿ 4 ಸ್ಥಾನಗಳನ್ನು ಗಳಿಸಿತು. ಇತ್ತ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 110 ಸ್ಥಾನಗಳನ್ನು ಗಳಿಸಿತು, ಆರ್‌ಜೆಡಿ 75, ಕಾಂಗ್ರೆಸ್ 19 ಮತ್ತು ಎಡಪಕ್ಷಗಳು 16 ಸ್ಥಾನಗಳನ್ನು ಗಳಿಸಿದವು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net