

ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ರಾಜ್ಯದ ಹಿತಕ್ಕೆ ಪೂರಕವಾಗಿಲ್ಲ. ಜನರಿಗೆ ಅಸಹ್ಯವಾಗುತ್ತಿದ್ದು, ಅವರು ಬೀದಿಯಲ್ಲಿ ಕಲ್ಲು ಹೊಡೆಯುವ ಮುನ್ನ ಎಲ್ಲಾ ಪಕ್ಷಗಳ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಅಭಿವೃದ್ಧಿ ಮಾಡಲಿ ಎಂದು ಜನ ರಾಜ್ಯದಲ್ಲಿ ಕಾಂಗ್ರೆಸ್‌ಗೆ, ದೇಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ. ಆದರೆ ಜನರಿಂದ ಆಯ್ಕೆಯಾದ ನಾಯಕರು ಆರೋಪ, ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ. ಅದನ್ನು ಮರೆತು ಈ ರೀತಿ ಕಿತ್ತಾಡುತ್ತಿರುವುದು ಸರಿಯೇ? ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಹೇಳಿದ್ದಾರೆ.
ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ. ಈ ಹೊತ್ತಿನಲ್ಲಿ ಜನ ಅಭಿವೃದ್ಧಿ, ಯುವಕರು, ರೈತರ ಸಮಸ್ಯೆ ಬಗೆಹರಿಸುವ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ. ಈ ಆರೋಪಗಳು ರಾಜ್ಯದ ಜನರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಜನ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಎದುರಾಗಲಿದೆ. ಪರಿಸ್ಥಿತಿ ಹೀಗೆ ಮುಂದಿವರಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ಈ ಪರಿಸ್ಥಿತಿ ಬರಬಹುದು ಎಂದು ಎಲ್ಲಾ ಪಕ್ಷದ ನಾಯಕರಿಗೆ ಎಚ್ಚರಿಸಲು ಬಯಸುತ್ತೇನೆ ಎಂದರು.
ಆರೋಪ ಪ್ರತ್ಯಾರೋಪಗಳನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ ಎಂದು ತಿಳಿಸಿದ ಅವರು ಚುನಾವಣೆಗೆ ಇನ್ನೂ ಸಮಯವಿದೆ. ರಾಜಕೀಯ ಕೆಸರೆರಚಾಟ ನಿಲ್ಲಲಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ. ತಾಯಿ ಚಾಮುಂಡಿ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು.