

ಬೆಂಗಳೂರು: ನಗರದಲ್ಲಿ ವೃಷಭಾವತಿ ನದಿ ಮತ್ತದರ ಉಪನದಿಗಳ ಪ್ರದೇಶಗಳ ಒತ್ತುವರಿ ತೆರವಿಗೆ ಹೊರಡಿಸಿರುವ ಆದೇಶಗಳ ಪಾಲನೆಯ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.
ಮಲಿನಗೊಂಡಿರುವ ನದಿ ಸಂರಕ್ಷಣೆ ಹಾಗೂ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಎಂಬುವರು ಸಲ್ಲಿಸಿದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ ನಗರದ ವಿವಿಧ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ವೃಷಭಾವತಿ ನದಿ ಮತ್ತು ಅದರ ಉಪನದಿಗಳ ಒತ್ತುವರಿ ಸೆ. 30ರೊಳಗೆ ತೆರವುಗೊಳಿಸುವಂತೆ ನ್ಯಾಯಪೀಠ 2022ರ ಜು. 28ಕ್ಕೆ ಎಂದು ಗಡುವು ವಿಧಿಸಿದ್ದರೂ ಅದಕ್ಕೆ ಪಾಲಿಕೆ ತಲೆಕೆಡಿಸಿಕೊಂಡಿಲ್ಲ. ನಾನಾ ರೀತಿಯಲ್ಲಿ ಸಬೂಬು ನೀಡುತ್ತ ನ್ಯಾಯಾಲಯದ ದಾರಿ ತಪ್ಪಿಸುತ್ತಿದೆ ಎಂದು ಪೀಠದ ಮುಂದೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳ ಪಾಲನೆಯ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ಏ. 9ಕ್ಕೆ ಮುಂದೂಡಿದೆ.