

ಶಿವಮೊಗ್ಗ: ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿರಲು, ಉತ್ತಮ ಜೀವನ ಸಾಗಿಸಲು, ನಮ್ಮನ್ನು ರಕ್ಷಣೆ ಮಾಡುವ ವ್ಯವಸ್ಥಿತ ಸರ್ಕಾರ ಅಧಿಕಾರಕ್ಕೆ ಬರಲು ಹಾಗೂ ಯೋಗ್ಯ ವ್ಯಕ್ತಿ ಆಯ್ಕೆಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಉದ್ಯಮಿ, ಸುರಭಿ ಗೋಶಾಲೆ ಪ್ರಮುಖರಾದ ಕೆ.ಸಿ.ನಟರಾಜ ಭಾಗವತ್ ಹೇಳಿದರು.
ಗೋಪಾಲಗೌಡ ಬಡಾವಣೆಯಲ್ಲಿ ಫ್ರೆಂಡ್ಸ್ ಸೆಂಟರ್‌ನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಹಾಗೂ ಮತದಾನ ಮಹತ್ವ ವಿಷಯ ಕುರಿತು ಮಾತನಾಡಿ, ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಒಂದು ಮತದಿಂದಲೂ ಅಭ್ಯರ್ಥಿ ಗೆದ್ದಿರುವ ಉದಾಹರಣೆಯಿದೆ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ. 100 ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವದ ಬೇರೆ ದೇಶಗಳಿಗಿಂತ ಭಾರತದಲ್ಲಿ ಚುನಾವಣಾ ಆಯೋಗವು ತುಂಬಾ ವ್ಯವಸ್ಥಿತವಾಗಿ ಚುನಾವಣೆಯನ್ನು ನಡೆಸುತ್ತದೆ. ಸಮರ್ಪಕವಾಗಿ ಮತದಾರರ ಪಟ್ಟಿ ಕಾಲಕಾಲಕ್ಕೆ ಪರಿಷ್ಕರಣೆಯಾಗಬೇಕು. ಒಂದೊಂದು ಮತವು ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ಪ್ರಜ್ಞಾವಂತ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಚ್.ಕೆ.ಲೋಕೇಶ್ ಮಾತನಾಡಿ, ಮತದಾನ ಎಲ್ಲರ ಆದ್ಯ ಕರ್ತವ್ಯ. ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಘ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರು, ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಎಸ್.ಸಿ.ರಾಮಚಂದ್ರ, ಪ್ರಮುಖರಾದ ವೆಂಕಟೇಶ್, ವಿ.ನಾಗರಾಜ್, ಬಸವರಾಜ್ ಇದ್ದರು.