

ಶ್ರೀರಂಗಪಟ್ಟಣ: ಪಟ್ಟಣದ ಸಮೀಪದ ಗಂಜಾಂನ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಸಂಸತ್ ಚುನಾವಣೆ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳಿಂದ ಮತದಾನದ ಮೂಲಕ ಅಧ್ಯಕ್ಷರ ಹಾದಿಯಾಗಿ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಸಂಸ್ಥೆಯ ಆಡಳಿತ ಮಂಡಳಿಯ ವಿದ್ಯಾರ್ಥಿ ಸಂಘದ ವಿವಿಧ ಸ್ಥಾನಗಳಿಗೆ 10 ದಿನಗಳ ಮೊದಲೇ ಹಲವು ವಿದ್ಯಾರ್ಥಿಗಳು ಸ್ಪರ್ಧಿಸಲಿಚ್ಛಿಸಿ ಭಾರತ ಚುನಾವಣಾ ಆಯೋಗದ ನೀತಿಯಂತೆ ತಮ್ಮ ಅಧಿಕೃತ ದಾಖಲೆಗಳೊಂದಿಗೆ ಅಭ್ಯರ್ಥಿಗಳಾಗಿ ಸಂಸ್ಥೆಯ ಸಿಬ್ಬಂದಿಗೆ ನಾಮಪತ್ರ ಸಲ್ಲಿಸಿ ಸ್ಕೂಟಿನಿ ಬಳಿಕ ಮಾನ್ಯತೆ ಪಡೆದವರು ಬ್ಯಾಲೆಟ್ ಪತ್ರಕ್ಕೆ ತಮ್ಮ ಅಧಿಕೃತ ಗುರುತನ್ನು ಪಡೆದರು. ಸಂಸ್ಥೆಯ ಆವರಣದಲ್ಲಿ ಸಹಪಾಠಿಗಳು ಹಾಗೂ ಸ್ನೇಹಿತರಲ್ಲಿ ಅಭ್ಯರ್ಥಿಗಳು 7 ದಿನಗಳಿಂದ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮುಗಿಸಿದ್ದರು.
ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಮಾದರಿಯಲ್ಲಿ ಸಂಸ್ಥೆಯ ಆವರಣದ ಕಟ್ಟಡದಲ್ಲಿ ಕಳೆದ ಜು.26ರಂದು ಆಡಳಿತ ಮಂಡಳಿ ಹಲವು ಮತ ಕೇಂದ್ರಗಳಿಗೆ ಭದ್ರತೆ ಕಲ್ಪಿಸಿ ತೆರೆದಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ತಮ್ಮ ಗುರುತಿನ ಚೀಟಿಗಳೊಂದಿಗೆ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಗಟ್ಟೆ ಅಧಿಕಾರಿಗಳಿಂದ ಕೈ ಬೆರಳಿನ ಶಾಹಿ ಪಡೆದು ವಿವಿಧ ಗುರುತುಗಳಿದ್ದ ಬ್ಯಾಲೆಟ್ ಪತ್ರಕ್ಕೆ ಗುಪ್ತ ಮತದಾನ ನಡೆಸಿ ಡಬ್ಬಕ್ಕೆ ಹಾಕುವ ಮೂಲಕ ಮತದಾನದ ಹಕ್ಕು ಚಲಾಯಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಆ.2 ರಂದು ನಡೆಸಿದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಫಲಿತಾಂಶ ಪ್ರಕಟಿಸಲಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ದ್ವಿತಿಯ ಪಿಯುಸಿ ವಿದ್ಯಾರ್ಥಿ ನಿಶಾಂಕ್, ಉಪಾಧ್ಯಕ್ಷೆಯಾಗಿ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ಐಶ್ವರ್ಯಾ ಹಾಗೂ ಪ್ರಧಾನ ಮಂತ್ರಿಯಾಗಿ ದ್ವಿತಿಯ ಪಿಯು ವಿದ್ಯಾರ್ಥಿನಿ ದಿವ್ಯಾ ಜೆಸ್ಲಿನ್ ಆಯ್ಕೆಯಾದರು. ಉಳಿದಂತೆ ಗೃಹಮಂತ್ರಿಯಾಗಿ ದ್ವಿತಿಯ ಪಿಯು ವಿದ್ಯಾರ್ಥಿನಿ ಸಂಜನಾ, ಕ್ರೀಡಾ ಸಚಿವರಾಗಿ ದ್ವಿತಿಯ ಪಿಯು ಮನೋಜ್‌ಕುಮಾರ್, ಶಿಕ್ಷಣ ಸಚಿವರಾಗಿ 8ನೇ ತರಗತಿಯ ಲಿಖಿತ್, ಆರೋಗ್ಯ ಸಚಿವರಾಗಿ ಪ್ರಥಮ ಪಿಯು ವಿದ್ಯಾರ್ಥಿನಿ ಕುಸುಮಿತಾ, ಶಿಸ್ತು ಸಚಿವರಾಗಿ ದ್ವಿತೀಯ ಪಿಯು ವಿದ್ಯಾರ್ಥಿ ನಿಖಿಲ್, ಉದ್ಯಾನ ಮತ್ತು ಪರಿಸರ ಸಚಿವರಾಗಿ ದ್ವಿತೀಯ ಪಿಯು ವಿದ್ಯಾರ್ಥಿ ಉಮಾಶಂಕರ್, ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ದ್ವಿತೀಯ ಪಿಯು ವಿದ್ಯಾರ್ಥಿ ಪ್ರತಾಪ್ ಪದವಿ ವಹಿಸಿಕೊಂಡರು. ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಸೋಮವಾರ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಖಾತೆಯ ಬ್ಯಾಡ್ಜ್‌ಗಳನ್ನು ವಿತರಿಸುವ ಜತೆಗೆ ಅಭಿನಂದಿಸಿ ಪ್ರಮಾಣ ವಚನ ಭೋದನೆಯೊಂದಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯಾ ಹಾಗೂ ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಿ ಸ್ಪಂದನಾ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.