

ಬೆಂಗಳೂರು: ನಗರದಲ್ಲಿ ಶುಕ್ರವಾರ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ವೇಳೆ ಕೆಲವು ಕಡೆ ತಾಂತ್ರಿಕ ಲೋಪದೋಷಗಳು, ಮತಗಟ್ಟೆಗಳಲ್ಲಿ ಪೋಲಿಂಗ್ ಎಜೆಂಟ್‌ಗಳು ಮತ್ತು ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದಗಳನ್ನು ಹೊರತುಪಡಿಸಿ ನಗರದಲ್ಲಿ ಮತದಾನ ಅಹಿತಕರ ಘಟನಾ ರಹಿತವಾಗಿ ನಡೆದಿದೆ. ಸಾರ್ವಜನಿಕರು ಮುಕ್ತವಾಗಿ ನಿರ್ಭೀತಿಯಿಂದ ಸುಲಲಿತವಾಗಿ ಮತದಾನ ಮಾಡಿದ್ದಾರೆ ಎಂದರು.
ಸ್ಟ್ರಾಂಗ್ ರೂಮ್‌ಗಳಿಗೆ ಬಿಗಿ ಭದ್ರತೆ:
ಮತಯಂತ್ರಗಳನ್ನು ಆಯಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದ್ದು, ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಸ್ಥಳೀಯ ಪೊಲೀಸರನ್ನು ಮತ್ತು ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದರೂ, ಲಿತಾಂಶಕ್ಕಾಗಿ ಜೂ.೪ರವರೆಗೂ ಕಾಯಬೇಕಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ಅರಮನೆ ರಸ್ತೆಯ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ಅದೇ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ವಿಟ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸ್ೆ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಾಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದು, ಅದೇ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಮತಯಂತ್ರವನ್ನು ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಇದೇ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.