

ಶಿವಮೊಗ್ಗ: ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ 27 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಮತದಾನ ನಡೆಯಿತು. ಆ.26ರಂದು ಫಲಿತಾಂಶ ಹೊರಬೀಳಲಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಹೊಸನಗರ ತಾಲೂಕಿನ ಮತದಾರರು ನಗರದ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಶಿಕಾರಿಪುರ, ಸೊರಬ ಮತ್ತು ಸಾಗರ ತಾಲೂಕಿನ ಮತದಾರರು ಶಿಕಾರಿಪುರದ ಗುರುಭವನ ಪಕ್ಕದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ಶಿಕಾರಿಪುರದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿ ಹಲವು ಮತದಾನ ಮಾಡಿದರು. ಶಿವಮೊಗ್ಗದಲ್ಲಿ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮನಿ ಎನ್. ಸಜ್ಜನ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್, ಮಲ್ಲಿಕಾರ್ಜುನ ಸ್ವಾಮಿ, ವಿಜಯಕುಮಾರ ಪಾಟೀಲ್ ಮತ್ತಿತರರು ಮತದಾನ ಮಾಡಿದರು.
ರಾಜ್ಯ ಘಟಕದ 27 ನಿರ್ದೇಶಕ ಸ್ಥಾನಕ್ಕೆ 58 ಮಂದಿ ಸ್ಪರ್ಧೆ ಮಾಡಿದ್ದು, ಶಿವಮೊಗ್ಗ ಜಿಲ್ಲೆಯಿಂದ ಶಿಕಾರಿಪುರದ ಈರೇಶ್ ಮತ್ತು ಸೊರಬದ ಗಿರೀಶ್‌ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಹಾಸಭಾ ಉಪಪೋಷಕರು ಹಾಗೂ ಮೇಲಿನ ಹಂತದ 1,050 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಒಬ್ಬ ಮತದಾರ 27 ಜನರಿಗೆ ಮತ ಚಲಾಯಿಸಲು ಅವಕಾಶವಿತ್ತು.