

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಗೆದ್ದ ನಂತರ ಹೊಸ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್, ಭಾರಿ ನಿರೀಕ್ಷೆಯೊಂದಿಗೆ ತೆಲಂಗಾಣ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದು, ಆಡಳಿತಾರೂಢ ಬಿಆರ್ಎಸ್ನ ಗೆಲುವಿನೋಟಕ್ಕೆ ಕಡಿವಾಣ ಹಾಕುವುದೇ ಎಂಬುದು ಇಂದು ನಿರ್ಧಾರವಾಗಲಿದೆ. ಗುರುವಾರ 119 ಕ್ಷೇತ್ರಗಳ ಚುನಾವಣೆಗೆ ಮತದಾನ ನಡೆಯಲಿದ್ದು, ಬಿಆರ್ಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿಯ ನಿರೀಕ್ಷೆ ಇದೆ. ಬಿಜೆಪಿ ಮೂರನೇ ಸ್ಥಾನದಲ್ಲಿರಲಿದೆ ಎಂದು ಬಹುತೇಕ ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಪ್ರತ್ಯೇಕ ತೆಲಂಗಾಣ ರಚನೆ ಬಳಿಕ ನಡೆಯುತ್ತಿರುವ 3ನೇ ವಿಧಾನಸಭೆ ಚುನಾವಣೆ ಇದಾಗಿದ್ದು, ಮೊದಲ ಬಾರಿಗೆ ಸಿಎಂ ಕೆಸಿಆರ್ ಚಂದ್ರಶೇಖರ್ ನೇತೃತ್ವದ ಪಕ್ಷ ಕಾಂಗ್ರೆಸ್ನಿಂದ ಪ್ರಬಲ ಹೋರಾಟ ಎದುರಿಸಿದೆ.
ಆಯೋಗದ ಕೆಂಗಣ್ಣು: ಕರ್ನಾಟಕ ದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೇರಿದ ಕಾಂಗ್ರೆಸ್, ತೆಲಂಗಾಣದಲ್ಲೂ ಅದೇ ಮಂತ್ರ ಜಪಿಸಿ ಜನಮನ ಸೆಳೆಯುವ ಯತ್ನ ಮಾಡಿದೆ. ಇದೇ ಕಾರಣಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೆಲಂಗಾಣದ ದಿನಪತ್ರಿಕೆಗಳಲ್ಲಿ ಗ್ಯಾರಂಟಿ ಸ್ಕೀಮ್ ಬಗ್ಗೆ ಜಾಹೀರಾತು ನೀಡಿತ್ತು. ಇದು ಆಯೋಗದ ಕೆಂಗಣ್ಣಿಗೂ ಗುರಿಯಾಗಿದೆ.
ದೂರ ಸರಿದ ಶರ್ವಿುಳಾ: ಆಂಧ್ರ ಸಿಎಂ ಜಗನ್ ರೆಡ್ಡಿ ಸೋದರಿ ಶರ್ವಿುಳಾ ನೇತೃತ್ವದ ವೈಎಸ್ಆರ್ ತೆಲಂಗಾಣ ಪಾರ್ಟಿ ಏಕಾಂಗಿಯಾಗಿ ಚುನಾವಣೆ ಸ್ಪರ್ಧಿಸುವುದಾಗಿ ಆರಂಭದಲ್ಲಿ ಹೇಳಿತ್ತಾದರೂ, ನಂತರದಲ್ಲಿ ತನ್ನ ನಿಲುವನ್ನು ಬದಲಿಸಿ ಕಾಂಗ್ರೆಸ್ ಬೆಂಬಲಿಸುವ ತೀರ್ಮಾನ ಪ್ರಕಟಿಸಿತು. ಮತಗಳ ವಿಭಜನೆ ತಪ್ಪಿಸಲು ನೀವು ನಮ್ಮನ್ನು ಬೆಂಬಲಿಸಬೇಕು ಎಂಬ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನವಿ ಒಪ್ಪಿದ ಶರ್ವಿುಳಾ, ಚುನಾವಣಾ ಕಣದಿಂದ ದೂರ ಸರಿಯಲು ನಿರ್ಧರಿಸಿದರು. ಬಿಜೆಪಿ ಪ್ರಧಾನಿ ನಾಯಕತ್ವದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಪ್ರಚಾರಗಳನ್ನು ನಡೆಸಿದ್ದರೂ, ಹೆಚ್ಚು ಮತಗಳನ್ನು ಬಾಚುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಸಟ್ಟಾ ಬಜಾರ್ ಸಮೀಕ್ಷೆಯೊಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್, ಬಿಆರ್ಎಸ್ ಸಮನಾಗಿ 53 ಸೀಟು ಗೆಲ್ಲಲಿದೆ ಎಂದು ಅಂದಾಜು ಮಾಡಿದೆ. ಬಿಜೆಪಿ 4 ಸೀಟುಗಳಿಗೆ ತೃಪ್ತಿಪಡಲಿದೆ ಎಂದಿದೆ. 2018ರ ರಾಜ್ಯ ಚುನಾವಣೆಯಲ್ಲಿ ಶೇ.73 ಮತದಾನವಾಗಿದ್ದರೆ, 2014ರಲ್ಲಿ ಶೇ.69ದಾಖಲಾಗಿತ್ತು. 2019ರಲ್ಲಿ ಬಿಆರ್ಎಸ್ 88, ಕಾಂಗ್ರೆಸ್ 19, ಎಐಎಂಐಎಂ 7 ಸೀಟುಗಳನ್ನು ಗೆದ್ದಿದ್ದವು. ಟಿಡಿಪಿ 2 ಗೆದ್ದರೆ ಬಿಜೆಪಿ 1 ಸೀಟನ್ನಷ್ಟೇ ತನ್ನದಾಗಿಸಿಕೊಂಡಿತ್ತು.
ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಮುಂದಿದ್ದೇವೆ. ತೆಲಂಗಾಣದಲ್ಲೂ ಕಾಂಗ್ರೆಸ್ ಪರ ಉತ್ತಮ ಫಲಿತಾಂಶ ಬರಲಿದೆ, ಮಿಜೋರಾಂನಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತೇವೆ ಎಂದು ಲೋಕಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ ಎಂದು ಸುದ್ದಿಗಾರರಿಗೆ ಹೇಳಿದರು. ಸಿಬಿಐ, ಇಡಿ, ಐಟಿ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರುಪಯೋಗ ಪಡಿಸಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ರಾಜಕೀಯವಾಗಿ ಬಳಕೆ ಆಗಬಾರದು. ಎಲ್ಲ ಇಲಾಖೆಗಳ ದಾಳಿ, ತನಿಖೆ ವಿಪಕ್ಷಗಳ ಮುಖಂಡರ ವಿರುದ್ಧವೇ ಆಗುತ್ತಿದೆ. ಕೊನೆಗೆ ಜನತೆಯೇ ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ರಿಲೀಫ್ ಸಿಕ್ಕಿರೋದು ಒಳ್ಳೆ ವಿಚಾರ ಎಂದರು.