

ಬಾಗಲಕೋಟೆ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾದ ಬೆನ್ನಲ್ಲೇ ಕಾಂಗ್ರೆಸ್ನವರು ಮೋದಿ ಗ್ರಾಫ್ ಇಳಿಯುತ್ತಿದೆ ಎಂದು ಲೇವಡಿ ಮಾಡುತ್ತಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಈ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಮೋದಿಯವರ ಗ್ರಾಫ್ ಇಳಿಯಲು ಸಾಧ್ಯವಿಲ್ಲ. ದೇಶದಲ್ಲಿ ಇನ್ನೂ 20ವರ್ಷ ಮೋದಿ ಗ್ರಾಫ್ ಇರುತ್ತದೆ. ಯಾವ ಕಾರಣಕ್ಕೂ ಅದು ಇಳಿಯುವುದಿಲ್ಲ ಎಂದಿದ್ದಾರೆ.
ದೆಹಲಿ ಚುನಾವಣೆ ಒಂದು ನಗರಕ್ಕೆ ಸೀಮಿತವಾದ ಚುನಾವಣೆ. ಹಿಂದೆ ಆಡಳಿತ ನಡೆಸಿದವರು ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಅದಕ್ಕೆ ಆಕರ್ಷಿತರಾಗಿ ಜನರು ಮತ ಕೊಟ್ಟಿದ್ದಾರೆ. ಮತ ಕೊಟ್ಟ ಜನರಿಗೆ ಮುಂದೆ ಖಂಡಿತ ನಿರಾಸೆಯಾಗಲಿದೆ ಎಂದು ಹೇಳಿದರು.
ನಾವು ಯಾವುದೇ ರಾಜ್ಯದಲ್ಲಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ದುಡಿಯುವ ಕೈಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು. ಅದು ಬಿಟ್ಟು ನೀರಿಗೆ, ಬಸ್ಗೆ, ಕರೆಂಟ್ಗೆ ತೆರಿಗೆ ತೆಗೆದುಕೊಳ್ಳೋದಿಲ್ಲ ಎನ್ನುವುದು ಸರಿಯಲ್ಲ ಎಂದರು.
ನಾವು ಜನರಿಂದ ಸಂಗ್ರಹ ಮಾಡಿದ ತೆರಿಗೆ ಹಣ ದೇಶಕ್ಕೆ ಆಸ್ತಿಯಾಗಬೇಕು. ಅಭಿವೃದ್ಧಿಗೆ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಚುನಾವಣೆ ಸಂದರ್ಭದಲ್ಲಿ ಕೆಲವರು ಹಣ ಕೊಟ್ಟು ಗೆದ್ದು ಬರುತ್ತಾರೆ. ದೆಹಲಿಯಲ್ಲಿರುವ ಯೋಜನೆಗಳು ಅದೇ ರೀತಿ ಆಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು, ನಾವು ಎಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತಿಲ್ಲ. ದೆಹಲಿ ನಮ್ಮ ಕೈಯಲ್ಲಿ ಇರಲಿಲ್ಲ. ಆಮ್ ಆದ್ಮಿ ಪಕ್ಷದ ಕೈಯಲ್ಲೇ ಇತ್ತು. ಅದನ್ನು ಅವರು ಉಳಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮಗೆ ಮತ ಬಿದ್ದ ಪ್ರಮಾಣ ಹೆಚ್ಚಾಗಿದೆ. ಹೆಚ್ಚು ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)