

Rahul Gandhi: ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ, ಆರ್ಎಸ್ಎಸ್ ಹಾಗೂ ಆಯೋಗವು ದೇಶದಲ್ಲಿ ಮತಗಳ್ಳತನದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ.
ಅರಾದಲ್ಲಿ ನಡೆದ "ಮತದಾರ ಅಧಿಕಾರ ಯಾತ್ರೆ"ಯ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಬಿಹಾರದಿಂದ ಪ್ರಾರಂಭವಾದ ಈ ಯಾತ್ರೆಯು ಮತಗಳ್ಳತನದ ವಿರುದ್ಧದ 'ದೇಶವ್ಯಾಪಿ ಚಳುವಳಿ'ಯಾಗಲಿದೆ ಎಂದು ಹೇಳಿದರು.
ಮತದಾನ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಹಕ್ಕು, ಆದರೆ ನರೇಂದ್ರ ಮೋದಿ ಸರ್ಕಾರ ಚುನಾವಣೆಗಳಲ್ಲಿ ಗೆಲ್ಲಲು ಮತಗಳ್ಳತನದಲ್ಲಿ ತೊಡಗಿದೆ. ಮತದಾನದ ಹಕ್ಕನ್ನು ಸಂವಿಧಾನವು ಖಾತರಿಪಡಿಸಿದೆ ಮತ್ತು ಅದನ್ನು ಯಾರೂ ಜನರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಈ ಹಿಂದೆ ಮಹಾರಾಷ್ಟ್ರ, ಹರಿಯಾಣ ಮತ್ತು ದೇಶದ ಇತರ ಭಾಗಗಳಲ್ಲಿ ಬಿಜೆಪಿ ಮತಗಳನ್ನು ಕದಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಅದನ್ನು ಪ್ರಸ್ತುತ ಪಡಿಸಲು ನಮ್ಮಲ್ಲಿ ಪುರಾವೆಗಳಿಲ್ಲದ ಕಾರಣ ನಾವು ಮೌನವಾಗಿದ್ದೇವೆ.ಆದರೆ ಈಗ ಮತಗಳ್ಳತನದ ಆರೋಪಗಳನ್ನು ದೃಢೀಕರಿಸಲು ನಮ್ಮ ಬಳಿ ಪುರಾವೆಗಳಿವೆ ಎಂದರು.
ಪ್ರಸ್ತುತ ಕೇಂದ್ರದಲ್ಲಿರುವ ಸರ್ಕಾರ, ಉದ್ಯಮಿಗಳಾದ ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗಾಗಿ ಇದೆ. ಅದಕ್ಕಾಗಿ ಬಡವರ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತಿದೆ. ಆದರೆ ವಿಪಕ್ಷಗಳ ಇಂಡಿಯಾ ಕೂಟ ಅದನ್ನು ಎದುರಿಸುತ್ತಿದೆ ಎಂದು ತಿಳಿಸಿದರು.
ಆಗಸ್ಟ್ 17 ರಂದು ರೋಹ್ತಾಸ್ ಜಿಲ್ಲೆಯ ಸಸಾರಾಮ್‌ನಿಂದ 'ಮತದಾರ ಅಧಿಕಾರ ಯಾತ್ರೆ'ಯನ್ನು ಪ್ರಾರಂಭಿಸಲಾಗಿದೆ. ಇಂಡಿಯಾ ಕೂಟದ ಬೆಂಬಲದೊಂದಿಗೆ ನಡೆಯುವ ಈ ಯಾತ್ರೆ ನಾಳೆ (ಸೆಪ್ಟೆಂಬರ್ 1) ಪಾಟ್ನಾದಲ್ಲಿ ಮುಕ್ತಾಯಗೊಳ್ಳಲಿದೆ. (ಏಜೆನ್ಸೀಸ್)