

Prashant Kishore: ಬಿಹಾರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಮತದಾರ ಅಧಿಕಾರ ಯಾತ್ರೆಯ ವಿರುದ್ಧ ಜನ್ ಸೂರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಿಶೋರ್, ರಾಹುಲ್ ಗಾಂಧಿಗೆ ಈಗಾ 55 ವರ್ಷ. ಆದರೆ, ಚುನಾವಣೆಯ ಸಮಯವನ್ನು ಹೊರತುಪಡಿಸಿ, ಬಿಹಾರದಲ್ಲಿ ರಾಹುಲ್ ಒಂದೇ ಒಂದು ರಾತ್ರಿ ಕಳೆದಿಲ್ಲ. ಅಲ್ಲದೆ, ಬಿಹಾರದ ಯಾವುದೇ ಜಿಲ್ಲೆಗಳ ಹೆಸರು ತಿಳಿದಿಲ್ಲದಿರಬಹುದು ಎಂದು ಟೀಕಿಸಿದ್ದಾರೆ.
ಮತದಾರರ ಅಧಿಕಾರ ಯಾತ್ರೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಮಾತನಾಡಿದ ಕಿಶೋರ್, ಬಿಹಾರದಲ್ಲಿ ಕಾಂಗ್ರೆಸ್ ಆರ್‌ಜೆಡಿಯ ಅನುಯಾಯಿ ಪಕ್ಷವಾಗಿದೆ ಮತ್ತು ರಾಹುಲ್ ಗಾಂಧಿ ಇಂತಹ ಯಾತ್ರೆಯಿಂದ ಯಾವುದೇ ಪ್ರಯೋಜನ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಇಂದು ಮತ ಅಧಿಕಾರ ಯಾತ್ರೆ ನಡೆಸುತ್ತಿರುವವರು, ಹಿಂದೆ ಹೆಚ್ಚಿನ ಮತಗಟ್ಟೆಗಳನ್ನು ಲೂಟಿ ಮಾಡಿ ಮತಗಳನ್ನು ಕದಿಯುತ್ತಿದ್ದರು ಎಂದು ಕಿಶೋರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಮಂಗಳವಾರ ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆಯ ಮೂರನೇ ದಿನವನ್ನು ಗಯಾದಿಂದ ಪ್ರಾರಂಭಿಸಿದರು, ಬಿಹಾರದಲ್ಲಿ ಮತ ಕಳ್ಳತನ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ 16 ದಿನಗಳ ಅಭಿಯಾನವನ್ನು ಮುಂದುವರೆಸಿದರು. ಇವರೊಂದಿಗೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಸಿಪಿಐ-ಎಂ ನಾಯಕ ದೀಪಂಕರ್ ಭಟ್ಟಾಚಾರ್ಯ ಸಹ ಭಾಗಿಯಾಗಿದ್ದರು.
ಈ ಯಾತ್ರೆ 16 ದಿನಗಳ ಕಾಲ ನಡೆಯಲಿದ್ದು, ಸುಮಾರು 1,300 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಬಿಹಾರದ 20 ಕ್ಕೂ ಹೆಚ್ಚು ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಇದು ಆಗಸ್ಟ್ 17 ರ ಭಾನುವಾರ ರೋಹ್ತಾಸ್‌ನ ಡೆಹ್ರಿ-ಆನ್-ಸೋನ್‌ನಲ್ಲಿ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್1 ರಂದು ಪಾಟ್ನಾದಲ್ಲಿ ಮುಕ್ತಾಯಗೊಳ್ಳಲಿದೆ.(ಏಜೆನ್ಸೀಸ್)