ಮತಪಟ್ಟಿ ತಯಾರಿಸಿದ್ದು ಗುಜರಾತ್​, ಬಿಹಾರ್​ನವರಲ್ಲ

mp mallesh babu
ಎಂ.ಮಲ್ಲೇಶ್​ ಬಾಬು
Published on

ಕೋಲಾರ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್​ ಸರ್ಕಾರ, ರಾಜ್ಯದಲ್ಲಿನ ಅಧಿಕಾರಿಗಳೇ ಮತದಾರರ ಪಟ್ಟಿ ತಯಾರಿಸಿದರೇ ಹೊರತು, ಬಿಹಾರ್​, ಗುಜರಾತ್​ನಿಂದ ಬಂದ ಅಧಿಕಾರಿಗಳಲ್ಲ ಎಂದು ಸಂಸದ ಎಂ.ಮಲ್ಲೇಶ್​ ಬಾಬು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ಅಧಿಕಾರಿಗಳೇ ಚುನಾವಣಾ ಆಯೋಗದ ಕಠಿಣ ನಿಯಮಗಳಡಿ ಮತಪಟ್ಟಿ ತಯಾರಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಒಬ್ಬರೇ 2 ಕಡೆ ಮತ ಚಲಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಲ್ಲಿನ ಅಧಿಕಾರಿಗಳೇ ಅರ್ಹ ಮತದಾರರನ್ನು ಗುರುತಿಸಿ ಚೀಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಕೆಲ ಸ್ಥಳಿಯರಿಗೆ ಗುರುತಿನ ಚೀಟಿ ನೀಡುವಾಗ ವ್ಯತ್ಯಾಸವಾಗಿದೆ. ೋಟೋ ಜತೆಗೆ ಸಂಖ್ಯೆ ಬಂದಿಲ್ಲ. ಆದರೆ, ಕಾಂಗ್ರೆಸ್​ನವರು ಚುನಾವಣಾ ಆಯೋಗದ ಬಗ್ಗೆ ಮಾತನಾಡಿದರೆ ಏನು ಪ್ರಯೋಜನ ಎಂದು ಕಿಡಿಕಾರಿದರು.

ಕೈಗಾರಿಕೆ ಪ್ರದೇಶ ಜಾಸ್ತಿ ಇರುವ ಜಿಲ್ಲೆಯಲ್ಲಿ ಉಡಾನ್​ ಯೋಜನೆಯಡಿ ಏರ್​ಪೋರ್ಟ್​ ನಿರ್ಮಾಣ ಮಾಡಬೇಕು ಎಂಬುದು ಮುಖ್ಯ ಉದ್ದೇಶ. ಈಗಾಗಲೇ ಡಿಆರ್​ಡಿಒ ಉಪಯೋಗಿಸುತ್ತಿರುವ ನಿಲ್ದಾಣವನ್ನು ಸಾರ್ವಜನಿಕರಿಗೂ ಷರತ್ತುಗಳಅಡಿ ಬಳಸಲು ಅವಕಾಶ ಕಲ್ಪಿಸಲು ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಾಲ್ಕು ರೈಲ್ವೆ ಮೇಲ್ಸೇತುವೆ ಆಗಲೇಬೇಕು ಎಂದು ಮನವಿ ಮಾಡಿದ್ದೆ. ಜತೆಗೆ ರೈಲ್ವೆ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತಂದ ಕಾರಣ ಟೆಂಡರ್​ ಹಂತಕ್ಕೆ ಬಂದಿದೆ. ಇಲ್ಲದಿದ್ದರೆ ಕಡತವು ಹುಬ್ಬಳಿಗೆ ಹೋಗಿ ಬರುವಷ್ಟರಲ್ಲಿ ತಡವಾಗುತ್ತಿತ್ತು ಎಂದು ಹೇಳಿದರು.

*ಪಪಂ ಚುನಾವಣೆಯಲ್ಲಿ ಎನ್​ಡಿಎಗೆ ಬಹುಮತ

ವೇಮಗಲ್​ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಪರವಾಗಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್​ನವರು ನಾಲ್ಕೆ$ದು ಸ್ಥಾನ ಮಾತ್ರ ಪಡೆದುಕೊಳ್ಳಬಹುದು. ಉಳಿದ ಸ್ಥಾನಗಳು ಎನ್​ಡಿಎ ಅಭ್ಯರ್ಥಿಗಳು ಆಯ್ಕೆಯಾಗುವ ವಿಶ್ವಾಸವಿದೆ. ಈ ಬಗ್ಗೆ ಸ್ಥಳಿಯರಿಂದ ತಿಳಿದು ಬಂದ ಮಾಹಿತಿ. ಕಾಂಗ್ರೆಸ್​ ಬಗ್ಗೆ ಅಸಮಾಧಾನ ಭುಗಿಲೆದ್ದಿದ್ದು, ಅವರನ್ನೆಲ್ಲ ನಮ್ಮತ್ತ ಸೆಳೆಯುವ ಕೆಲಸ ಸಿಎಂಆರ್​ ಶ್ರೀನಾಥ್​, ವರ್ತೂರು ಪ್ರಕಾಶ್​ ಅವರು ಮಾಡುತ್ತಿದ್ದು, ನಮಗೆ ಬಹುಮತ ದೊರೆಯುವುದು ಖಚಿತ ಎಂದು ಮಲ್ಲೇಶ್​ಬಾಬು ವಿಶ್ವಾಸ ವ್ಯಕ್ತಪಡಿಸಿದರು.

* ಜಿಲ್ಲೆಗೆ ಮೆಟ್ರೋ ವಿಸ್ತರಿಸಲು ಮನವಿ

ಮಾಲೂರು ತನಕ ಮೆಟ್ರೋ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಇದಕ್ಕೆ ಬೇಕಾಗಿರುವ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಆಗಬೇಕಾಗಿರುವ ಕೆಲಸಕ್ಕಾಗಿ ಪತ್ರ ಕೊಟ್ಟು ಸುಮ್ಮನಿಲ್ಲ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿರುವುದರಿಂದ ಕೆಲಸ ಆಗುತ್ತಿದೆ.

ಇದಕ್ಕೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯಲಾಗಿದ್ದು, ಭೂಮಿ ಸ್ವಾಧಿನಪಡಿಸಿಕೊಡಲಾಗುವುದು ಎಂದು ಅಶ್ವಾಸನೆ ನೀಡಿದ್ದು, ಬಂಡವಾಳ ಹಾಕಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅವರಿಂದ ಪ್ರತಿಕ್ರಿಯೆ ಬಂದ ತಕ್ಷಣ ಕ್ರಮವಹಿಸಲಾಗುವುದು ಎಂದು ಸಂಸದರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net