

ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಅಗತ್ಯವಾದ ಕಾನೂನು ರೂಪಿಸಲು ಮಂಡಿಸಲಾದ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ.
ಕಾನೂನು ಸಚಿವ ಕಿರಣ್ ರಿಜಿಜು ಈ ತಿದ್ದುಪಡಿ ಮಂಡಿಸುತ್ತಿದ್ದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಮೂಲಭೂತಹಕ್ಕಿಗೆ ಚ್ಯುತಿ ಆಗುತ್ತದೆ ಎಂದು ಆರೋಪಿಸಿದವು. ಆದರೆ, ಇದನ್ನು ತಳ್ಳಿಹಾಕಿದ ರಿಜಿಜು, ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ನಕಲಿ ಮತದಾನವನ್ನು ತಡೆಯಬಹುದು ಎಂದು ಸಮರ್ಥಿಸಿಕೊಂಡರು. ಆದರೂ ಸಮಾಧಾನಗೊಳ್ಳದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸದಸ್ಯರು ಸ್ಪೀಕರ್ ಮುಂದಿನ ಅಂಗಳಕ್ಕೆ ನುಗ್ಗಿ ಪ್ರತಿಭಟನೆ ಮಾಡಿದರು. ಮಸೂದೆಯನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಚುನಾವಣಾ ಆಯೋಗದ ಶಿಫಾರಸಿನಂತೆ ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು ಕಾನೂನು ರೂಪಿಸುವ ನಿಟ್ಟಿನಲ್ಲಿ ಚುನಾವಣಾ ಕಾನೂನು (ತಿದ್ದುಪಡಿ)ಗೆ ಕಳೆದ ಬುಧವಾರ ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು.
ವಿರೋಧ ಪಕ್ಷಗಳ ಆಕ್ಷೇಪ ಏನು?: ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ, ಇದು ವಿಳಾಸದ ದೃಢೀಕರಣ. ಇದನ್ನು ವೋಟರ್ ಐಡಿಗೆ ಲಿಂಕ್ ಮಾಡಿದರೆ ದೇಶದ ನಾಗರಿಕರಲ್ಲದವರಿಗೂ ಮತದಾನದ ಹಕ್ಕು ನೀಡಿದಂತೆ ಆಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ಷೇಪಿಸಿದರು. ಇದಕ್ಕೆ ದನಿ ಗೂಡಿಸಿದ ಮನಿಷ್ ತಿವಾರಿ, ಮತದಾನವು ಕಾನೂನು ಬದ್ಧ ಹಕ್ಕು. ಆದರೆ, ಆಧಾರ್ ಕಾರ್ಡ್ಗೆ ವೋಟರ್ ಐಡಿ ಜೋಡಣೆ ಮಾಡುವುದು ತಪ್ಪಾಗುತ್ತದೆ ಎಂದರು. ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ಟಿಎಂಸಿ ವಿರೋಧಿಸುತ್ತದೆ ಎಂದು ಸೌಗತೊ ರಾಯ್ ಹೇಳಿದರು.
ವಂಚಕರ ಆಸ್ತಿಯಿಂದ 13 ಸಾವಿರ ಕೋಟಿ ರೂ. ಸಂಗ್ರಹ: ಸಾಲ ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಯಂತಹ ಅರ್ಥಿಕ ಅಪರಾಧಿಗಳಿಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡಿ ಬ್ಯಾಂಕ್ಗಳು 13,109.17 ಕೋಟಿ ರೂಪಾಯಿ ವಸೂಲು ಮಾಡಿಕೊಂಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದರು.
ಸಂಧಾನ ಮುಂದುವರಿಕೆ: ಮಳೆಗಾಲದ ಅಧಿವೇಶನದಲ್ಲಿ ಅಸಂಸದೀಯ ವರ್ತನೆ ತೋರಿದ 12 ಸಂಸದರನ್ನು ಅಮಾನತು ಮಾಡಿರುವುದರಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರ ಕರೆದಿದ್ದ ಸಭೆಯಲ್ಲಿ ಸಂಧಾನ ಮುಂದುವರಿದಿದೆ. ಈ ಸಭೆಗೆ ಸರ್ಕಾರ ಕಾಂಗ್ರೆಸ್, ಟಿಎಂಸಿ, ಶಿವಸೇನೆ ಮತ್ತು ಸಿಪಿಎಂ ್ಕ ಪಕ್ಷಗಳಿಗಷ್ಟೆ ಆಹ್ವಾನ ನೀಡಿರುವುದು ಉಳಿದ ವಿರೋಧ ಪಕ್ಷಗಳನ್ನು ಕೆರಳಿಸಿವೆ. ಈ ಮಧ್ಯೆ, ಸಂಸದರ ಅಮಾನತು ಕುರಿತಂತೆ ರ್ಚಚಿಸಲು ನಿಯಮ 267ರ ಅಡಿ ಅವಕಾಶ ನೀಡುವಂತೆ ಕಾಂಗ್ರೆಸ್ ಕೋರಿತು. ಆದರೆ, ಸದನ ಸುಗವಾಗಿ ನಡೆಯದ ಕಾರಣ ಈ ನೋಟಿಸನ್ನು ತಳ್ಳಿಹಾಕಿರುವುದಾಗಿ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಈ ವಿಷಯವಾಗಿ ಗದ್ದಲ ಹೆಚ್ಚಾದ ಕಾರಣ ಮೇಲ್ಮನೆಯ ಕಲಾಪವನ್ನು ಮೂರು ಸಲ ಮುಂದೂಡಿಲಾಗಿತ್ತು. ಲೋಕಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಜಾಗೊಳಿಸಲು ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ ಇದರಿಂದ ಕೆಲವು ಕಾಲ ಕಲಾಪಕ್ಕೆ ಅಡಚಣೆ ಆಯಿತು.
ಲಡಾಖ್ಗೆ ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸಿ ನಿಲುವಳಿ ನೋಟಿಸ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಿಲುವಳಿ ಮಂಡನೆಗೆ ನೋಟಿಸ್ ನೀಡಿದರು. ಸಂವಿಧಾನದ ನಾಲ್ಕನೇ ಪರಿಚ್ಛೇದಕ್ಕೆ ಲಡಾಖ್ ಅನ್ನು ಸೇರಿಸುವ ಮೂಲಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ಲಖಿಂಪುರ ಖೇರಿಯ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಪ್ರಕರಣದಲ್ಲಿ ಕಳಂಕಿತರಾದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಏಕೆ ಕೈಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಹೆಣ್ಣುಮಕ್ಕಳ ವಿವಾಹ ವಯಸ್ಸು ಸಂಸದೀಯ ಸಮಿತಿ ಪರಿಶೀಲನೆ: ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಆತುರ ತೋರದಿರಲು ಸರ್ಕಾರ ತೀರ್ವನಿಸಿದೆ. ಈ ತಿದ್ದುಪಡಿಯು ಸಂಸತ್ನ ಆಯ್ಕೆ ಸಮಿತಿಯ ಪರಾಮರ್ಶೆಗೆ ಒಪ್ಪಿಸುವ ಸಂಭವ ಇದೆ. ಕಾಂಗ್ರೆಸ್, ಸಿಪಿಎಂ, ಸಮಾಜವಾದಿ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.
ವೋಟರ್ ಐಡಿಗೆ ಆಧಾರ್ ಜೋಡಣೆಗೆ ಸಂಬಂಧಿಸಿದ ಮಸೂದೆಯು ಸಂವಿಧಾನ ಬಾಹಿರ. ಆಧಾರ್ ಕುರಿತಂತೆ ಖಾಸಗಿತನ ವಿಷಯ ದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೂ ವಿರುದ್ಧವಾಗಿದೆ.
| ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ಪ್ರಮುಖ ಇಂಧನವಾಗಿದ್ದು, ಭವಿಷ್ಯದಲ್ಲಿ ಕೈಗೆಟಕುವ ಮೂಲವಾಗಿಯೇ ಉಳಿಯಲಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಉತ್ತೇಜನದ ಹೊರತಾಗಿಯೂ ವಿದ್ಯುತ್ ಉತ್ಪಾದನೆಯಲ್ಲಿ ಸ್ಥಿರತೆ ಮತ್ತು ವಿದ್ಯುತ್ ಸುರಕ್ಷತೆಗಾಗಿ ಕಲ್ಲಿದ್ದಲು ಪ್ರಮುಖ ಆಕರವಾಗಿರಲಿದೆ
| ಪ್ರಲ್ಹಾದ್ ಜೋಶಿ ಕಲ್ಲಿದ್ದಲು ಸಚಿವ (ರಾಜ್ಯಸಭೆಯಲ್ಲಿ ಉತ್ತರ)