

ಭದ್ರಾವತಿ: ಚುನಾವಣಾ ಸಂದರ್ಭದಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಮತದಾನ ಮಾಡುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಚುನಾವಣಾ ಆಡಳಿತ, ಶಿಕ್ಷಣ ಇಲಾಖೆಯಿಂದ ಕಾಗದನಗರದ ಎಂಪಿಎಂ ಇಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಇಎಲ್‌ಸಿ ಸ್ಪರ್ಧೆ ಹಾಗೂ ಮತದಾನದ ಮಹತ್ವದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು. ಉತ್ತಮ ಅಭ್ಯರ್ಥಿಯ ಆಯ್ಕೆ ನಮ್ಮದಾಗಬೇಕು. ಆಗ ರಾಜ್ಯದಲ್ಲಿ ಉತ್ತಮ ಆಡಳಿತ ಕಾಣಲು ಸಾಧ್ಯ. ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯ ಬಗ್ಗೆ ಸೂಕ್ತ ಅರಿವು ಹೊಂದುವುದು ಅಗತ್ಯ ಎಂದರು.
ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ ಮಾತನಾಡಿ, ಯುವಜನರು ಈ ದೇಶದ ಆಸ್ತಿ ಹಾಗೂ ಶಕ್ತಿ. ಸಂವಿಧಾನದಲ್ಲಿ ನಮ್ಮ ಹಕ್ಕಿನ ಮಹತ್ವವೇನು ಎಂಬುದನ್ನು ತಿಳಿಸಿಕೊಡಲಾಗಿದೆ. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಹಕ್ಕಿನ ಮಹತ್ವವನ್ನು ನಮ್ಮ ನೆರೆಹೊರೆ, ಕುಟುಂಬದವರಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ಪ್ರಾಚಾರ್ಯ ಜಿ.ಎಂ.ಲಕ್ಷ್ಮೀಕಾಂತ್ ಮಾತನಾಡಿ, ಒಬ್ಬ ರೋಗಿಯ ಜೀವ ಉಳಿಸಲು ರಕ್ತದಾನ ಎಷ್ಟು ಮುಖ್ಯವೋ ರಾಜಕೀಯ ಕ್ಷೇತ್ರದಲ್ಲಿ ಮತದಾನವೂ ಅಷ್ಟೇ ಮುಖ್ಯ. ದೇಶದ ಅಭಿವೃದ್ಧಿಯಲ್ಲಿ ಮತದಾನವು ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಇಎಲ್‌ಸಿ ಸಂಯೋಜಕ ನವೀದ್ ಅಹಮದ್ ಪರ್ವೀಜ್, ಬಿಇಒ ಎ.ಕೆ.ನಾಗೇಂದ್ರಪ್ಪ. ಸಂಚಿಯ ಹೊನ್ನಮ್ಮ ಕಾಲೇಜು ಪ್ರಾಚಾರ್ಯ ಸಿದ್ದಲಿಂಗಮೂರ್ತಿ, ನ್ಯೂಟೌನ್ ಬಾಲಕಿಯರ ಕಾಲೇಜು ಪ್ರಾಚಾರ್ಯ ಕುಟ್ರಿ, ಶಶಿಕುಮಾರ್ ಇತರರಿದ್ದರು.