ಅಂಬೇಡ್ಕರ್ ಸೋಲಿನಿಂದಲೇ ಶುರುವಾಯಿತು ಮತಗಳ್ಳತನ: ಛಲವಾದಿ ನಾರಾಯಣಸ್ವಾಮಿ ಆರೋಪ | Vote Rigging

Untitled design - 2025-08-07T171106.033
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ದಿನದಿಂದಲೇ ಮತಗಳ್ಳತನ(Vote rigging) ಶುರುವಾಯಿತು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ಈಗ ಕಾಂಗ್ರೆಸ್ ಪಕ್ಷದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ವಿಚಾರದ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಆದರೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೊದಲ ಚುನಾವಣೆಯಲ್ಲಿ ಸುಮಾರು 13 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ. ಆಗ 75 ಸಾವಿರ ಕುಲಗೆಟ್ಟ ಮತಗಳು ಇರುತ್ತದೆ. ಮತಗಳ್ಳತನ ಪ್ರಾರಂಭವಾಗಿದ್ದೇ ಅಲ್ಲಿಂದ, ಇದನ್ನು ಅಂಬೇಡ್ಕರ್ ಅವರೇ ಹೇಳಿದ್ದಾರೆ. ನೆಹರು ಮತ್ತು ಕಾಂಗ್ರೆಸ್ ಅವರಿಂದಲೇ ಮತಗಳ್ಳತನ ಪ್ರಾರಂಭವಾಯಿತು ಎಂದು ಟೀಕಿಸಿದರು.

ಈ ಹಿಂದೆ 1971 ರಲ್ಲಿ ಇಂದಿರಾಗಾಂಧಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಲಹಾಬಾದ್ ಹೈಕೋರ್ಟ್ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ತೀರ್ಪು ನೀಡಿತ್ತು. ಇದು ಕೂಡ ಮತಗಳ್ಳತನ ಪ್ರಕರಣವಾಗಿತ್ತು. ಅವರಿಗೆ ಬಂದ ಆಪತ್ತನ್ನು ತಪ್ಪಿಸಿಕೊಳ್ಳಲು ಇಡೀ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿದರು ಎಂದು ದೂರಿದರು.

ಒಂದು ವೇಳೆ ಮತಗಳ್ಳತನ ನಡೆದಿದ್ದರೇ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಬರಲು ಸಾಧ್ಯವಾಗುತ್ತಿತ್ತೆ. ಮತಗಳ್ಳತನ ನಡೆದಿದ್ದರೇ ರಾಹುಲ್ ಗಾಂಧಿ ಅವರು ಈ ದೇಶದ ಲೋಕಸಭಾ ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಿರುತ್ತಿತ್ತೇ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿಯಾಗಿದ್ದು, ಅವರು ಮಾತುಗಳಿಗೆ ಮನ್ನಣೆ ನೀಡಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net