ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅಕ್ರಮ ಆರೋಪ : ಕೆ.ಜೆ. ಜಾರ್ಜ್ ವಿರುದ್ಧದ ಖಾಸಗಿ ದೂರಿನ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ

Published on

ಬೆಂಗಳೂರು:  ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧದ ಖಾಸಗಿ ದೂರಿನ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಖಾಸಗಿ ದೂರು ರದ್ದುಕೋರಿ ಕೆ.ಜೆ.ಜಾರ್ಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿರುವ ಸಿ.ಎನ್.ಅಶ್ವತ್ಥನಾರಾಯಣ, ಎಸ್.ಆರ್.ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಅವರಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವುದಕ್ಕೆ ಸೂಚನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಕ್ಷಿದಾರರು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಪ್ರಾಸಿಕ್ಯೂಷನ್ ಆರಂಭಿಸಿ, ಸಂಜ್ಞೆ ಪರಿಗಣಿಸಿದಾಗ ಸಾರ್ವಜನಿಕ ಸೇವಕರಿಗೆ ಎರಡು ಹಂತದಲ್ಲಿ ರಕ್ಷಣೆ ಇರುತ್ತದೆ. ಇದರನ್ವಯ ಅವರ ವಿರುದ್ಧದ ವಿಚಾರಣೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಆ ಪ್ರಕ್ರಿಯೆ ಪಾಲಿಸಲಿಲ್ಲ. ಇದು ಕಾನೂನುಬಾಹಿರ ಎಂದು ಪೀಠಕ್ಕೆ ವಿವರಿಸಿದರು.

ದೂರುದಾರರ ಪರ ವಕೀಲರು, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿದಾಗ ಅದಕ್ಕೆ ಸಂಬಂಧಿಸಿದಂತೆ ವರದಿಯನ್ನು ಕೇಳುವುದಕ್ಕೆ ನ್ಯಾಯಾಲಯಕ್ಕೆ ಅವಕಾಶ ಇರಲಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ನಮ್ಮ ಕಕ್ಷಿದಾರರಿಗೆ ನೋಟಿಸ್ ಬಂದಿಲ್ಲ, ಅರ್ಜಿಯ ಪ್ರತಿಯನ್ನು ನೋಡಿಲ್ಲ. ಆದಕಾರಣ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಈ ಅಂಶ ಪರಿಗಣಿಸಿದ ನ್ಯಾಯಪೀಠ, ಪ್ರಕರಣ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿ, ಆ.20ಕ್ಕೆ ವಿಚಾರಣೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net