

Volcano Erupts: ರಷ್ಯಾದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸುವ ಸಾಧ್ಯತೆಗಳು ಹೆಚ್ಚಿದೆ ಎಂದು ರಷ್ಯಾ ಮೂಲಗಳು ತಿಳಿಸಿವೆ. ಕುರಿಲ್ ದ್ವೀಪಗಳಲ್ಲಿ ಭೂಕಂಪನ ಉಂಟಾದ ಬೆನ್ನಲ್ಲೇ 600 ವರ್ಷಗಳ ಬಳಿಕ ಇದೇ ಮೊದಲಿಗೆ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದು ಜನರಲ್ಲಿ ತೀವ್ರ ಕುತೂಹಲ ಹಾಗೂ ಭಯದ ಭೀತಿ ಮೂಡಿಸಿದೆ. ಜ್ವಾಲಾಮುಖಿ ಚಿಮ್ಮಲು ಇತ್ತೀಚಿನ ಪ್ರಕೃತಿ ವಿಕೋಪಗಳೇ ಕಾರಣ ಎನ್ನಲಾಗಿದೆ.
"ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿರುವ ಕ್ರಾಶೆನ್ನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡಿದೆ. 600 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಜ್ವಾಲಾಮುಖಿ ಚಿಮ್ಮಿದೆ. ಕಳೆದ ವಾರ ರಷ್ಯಾದಲ್ಲಿ ಸಂಭವಿಸಿದ ದೊಡ್ಡ ಭೂಕಂಪದಿಂದಾಗಿ ಜ್ವಾಲಾಮುಖಿ ಸ್ಫೋಟಗೊಂಡಿರಬಹುದು. ಇದೇ ಮೊದಲ ಬಾರಿಗೆ ಕ್ರಾಶೆನ್ನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡಿದೆ" ಎಂದು ಅಧಿಕಾರಿ ಓಲ್ಗಾ ಗಿರಿನಾ ಹೇಳಿದ್ದಾರೆ.
"ಬುಧವಾರ ಸಂಭವಿಸಿದ ಭೂಕಂಪಕ್ಕೂ ಈ ಸ್ಫೋಟಕ್ಕೂ ಸಂಬಂಧವಿರಬಹುದು. ಇದು ಫ್ರೆಂಚ್ ಪಾಲಿನೇಷ್ಯಾ ಮತ್ತು ಚಿಲಿಯವರೆಗೆ ಸುನಾಮಿ ಎಚ್ಚರಿಕೆಗಳನ್ನು ಕೊಟ್ಟಿದೆ. ಕಮ್ಚಟ್ಕಾ ಪರ್ಯಾಯ ದ್ವೀಪದ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾದ ಕ್ರಾಶೆನ್ನಿಕೋವ್ ಸ್ಫೋಟಗೊಂಡಿರುವುದು ನಮಗೆ ಆಶ್ಚರ್ಯ ತಂದಿದೆ. ಯಾಕಂದ್ರೆ, ಇಲ್ಲಿ ಕೊನೆಯ ಬಾರಿಗೆ ಲಾವಾ ಚಿಮ್ಮಿದ್ದು 1463ರಲ್ಲಿ" ಎಂದು ಓಲ್ಗಾ ಗಿರಿನಾ ನೆನಪಿಸಿಕೊಂಡಿದ್ದಾರೆ.
ಜ್ವಾಲಾಮುಖಿ ಸ್ಫೋಟದ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ವಿಡಿಯೋದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯಿಂದ ಬಿಳಿ ಬೂದಿ ಮೋಡವನ್ನು ಆವರಿಸಿಕೊಳ್ಳುತ್ತಿರುವುದನ್ನು ಕಾಣಬಹುದು,(ಏಜೆನ್ಸೀಸ್).