

ಗುಬ್ಬಿ: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಹಲವು ಸಂಸದರೊಂದಿಗೆ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯಿಸುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಆಯೋಜಿಸಿದ್ದ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮ ಹಾಗೂ ಜಾಥಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು
.ಕಳೆದ ಅಧಿವೇಶನದಲ್ಲಿ ಕಾಡುಗೊಲ್ಲ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ್ದು, ಮುಂಬರುವ ಅಧಿವೇಶನದಲ್ಲಿ ಹೆಚ್ಚು ಒತ್ತುಕೊಡುವೆ. ತಾವೆಲ್ಲರೂ ಮೂಢನಂಬಿಕೆಯಿಂದ ಹೊರಬಂದು ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಬೇಕು. ಎಲ್ಲರಿಗೂ ಉನ್ನತ ಶಿಕ್ಷಣ ಸಿಗುವಂತಾಗಬೇಕು. ಇದೆಲ್ಲದಕ್ಕೂ ನಿಮ್ಮ ಸಮುದಾಯ ಒಗ್ಗಟ್ಟಾಗಿ ಹೋರಾಡಿದರೆ ಪ್ರತಿಫಲ ಪಡೆಯಲು ಸಾಧ್ಯ ಎಂದರು.
ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯವಿದ್ದು, ಎರಡ್ಮೂರು ವರ್ಷಗಳಿಂದ ನಿರಂತರವಾಗಿ ನಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ನಾವು ಹೋರಾಟ ಮಾಡುತ್ತಿದ್ದೇವೆ. ಎಲ್ಲ ಪಕ್ಷದ ನಾಯಕರು, ಶಾಸಕರು ಸೇರಿ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಕಾಡುಗೊಲ್ಲ ಸಮುದಾಯದ ಅಧ್ಯಕ್ಷ ರಾಜಣ್ಣ ಮನವಿ ಮಾಡಿದರು.
ಸಂಸತ್ ಸಭೆಯಲ್ಲಿ ಮಲಗಿಯಾದರೂ ಒತ್ತಾಯಿಸಿ: ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಪಟ್ಟಿ ರವಾನೆಯಾಗಿದ್ದು, ಸಂಸದ ಜಿ.ಎಸ್.ಬಸವರಾಜ ಸಂಸತ್ ಸಭೆಯಲ್ಲಿ ಮಲಗಿಯಾದರೂ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು. ನಾವೂ ಸಂಸದರೊಂದಿಗೆ ನಿಂತು ಹೋರಾಡಲು ಬದ್ಧವಾಗಿದ್ದೇವೆ. ಕೇವಲ ಚುನಾವಣೆಗೋಸ್ಕರ ಈ ಮಾತುಗಳನ್ನು ಹೇಳುತ್ತಿಲ್ಲ. ನಿಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಶಿಕ್ಷಣ, ಉದ್ಯೋಗ ಸೇರಿ ಮುಂದಿನ ನಿಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದರು.
ಗುಬ್ಬಿ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾಡುಗೊಲ್ಲರ ಎಸ್ಟಿ ಮೀಸಲಾತಿಗೆ ಹಕ್ಕೊತ್ತಾಯ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿದರು. ಕಾಡುಗೊಲ್ಲರ ಜಿಲ್ಲಾಧ್ಯಕ್ಷ ಗಂಗಾಧರ್, ತಾಲೂಕಾಧ್ಯಕ್ಷ ದೇವರಾಜ್, ಪೂಜಾರಿಗಳಾದ ಪಾಪಣ್ಣ ಯರಪ್ಪ, ಮುಖಂಡರಾದ ಬಸವರಾಜು, ತಿಮ್ಮಣ್ಣ, ಯಶೋದಮ್ಮ, ನಾಗರಾಜು,ಕೆ.ಟಿ.ಪ್ರಭು ಗುಡ್ಡದಹಳ್ಳಿ ಬಸವರಾಜು, ಜುಂಜೆ ಗೌಡ, ಸಿದ್ದರಾಜು ಕೃಷ್ಣಮೂರ್ತಿ ಇತರರಿದ್ದರು.