

ಉತ್ತರಪ್ರದೇಶ ಹಾಥರಸ್ ಸದ್ಯ ಅತ್ಯಾಚಾರ ಪ್ರಕರಣವೊಂದರ ಸಂಬಂಧ ಹೆಚ್ಚು ಸುದ್ದಿಯಲ್ಲಿದೆ. ಆದರೆ ಇದೇ ಗ್ರಾಮದಿಂದಲ್ಲೇ ವಿಶ್ವ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೆ ಮೊದಲ ಶಿಷ್ಯ ಲಭಿಸಿದ್ದರು ಎಂದು ರಾಮಕೃಷ್ಣ ಮಿಷನ್ನ ಅಧ್ಯಯನಕಾರರೊಬ್ಬರಿಂದ ತಿಳಿದುಬಂದಿದೆ.
1887ರಲ್ಲಿ ವಿವೇಕಾನಂದರು ಕಾಶಿಯಿಂದ ಕೋಲ್ಕತಗೆ ತೆರಳುವ ಮಾರ್ಗದಲ್ಲಿ ಹಾಥರಸ್ನ ರೈಲು ನಿಲ್ದಾಣಕ್ಕೆ ಬಂದು ಕೆಲವು ಕಾಲ ಅಲ್ಲಿನ ಬೆಂಚ್ನ ಮೇಲೆ ಕೂತಿದ್ದರು. ಆಗ ಅಲ್ಲಿನ ಅಸಿಸ್ಟಂಟ್ ಸ್ಟೇಷನ್ ಮಾಸ್ಟರ್ ಶರತ್ಚಂದ್ರ ಗುಪ್ತಾ ಎಂಬುವವರು ವಿವೇಕಾನಂದರನ್ನು ಗಮನಿಸಿ, ಅವರ ಬಳಿ ಬಂದು ಸ್ವಾಮಿ ನೀವು ಹೋಗುವುದಿಲ್ಲವೇ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿವೇಕಾನಂದರು ‘ಹೂ ನಾನು ಹೋಗಬೇಕು, ಆದರೆ ಎಲ್ಲಿಗೆ? ನನಗೆ ಆ ಬಗ್ಗೆ ಗೊತ್ತಿಲ್ಲ, ನಾನು ಗುರಿ ಇಲ್ಲದಿರುವವ’ ಎಂದಿದ್ದರು. ಕೆಲಕಾಲದ ಮಾತುಕತೆ ಬಳಿಕ ವಿವೇಕಾನಂದರ ಅಪಾರ ಜ್ಞಾನದ ಬಗ್ಗೆ ಅಭಿಮಾನ ಹೊಂದಿದ ಗುಪ್ತಾ, ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಎರಡು ದಿನ ಅಲ್ಲಿ ತಂಗಿದ್ದ ವಿವೇಕಾನಂದರು, ಹೊರಡುವುದಾಗಿ ಗುಪ್ತಾಗೆ ತಿಳಿಸಿದರು. ಸ್ವಲ್ಪ ಹೊತ್ತು ಕಾಯಿರಿ ಎಂದು ಹೇಳಿ ಸ್ಟೇಷನ್ಗೆ ಹೋದ ಗುಪ್ತಾ, ಕೆಲಸಕ್ಕೆ ರಾಜೀನಾಮೆ ನೀಡಿ ವಿವೇಕಾನಂದರ ಶಿಷ್ಯರಾಗಿ ಸೇರಿಕೊಂಡರು. ಅವರೇ ವಿವೇಕಾನಂದರ ಮೊದಲ ಶಿಷ್ಯ ಸ್ವಾಮಿ ಸದಾನಂದ ಎಂದು ಅಧ್ಯಯನಕಾರರು ಮಾಹಿತಿ ನೀಡಿದ್ದಾರೆ. ಸ್ವಾಮಿ ಸದಾನಂದರಾಗಿ ಬದಲಾದ ಗುಪ್ತಾ ದೇಶ ವಿದೇಶಗಳಲ್ಲಿ ಸಂಚರಿಸಿ ತಮ್ಮ ಗುರುವಿನ ವಿಚಾರಧಾರೆಗಳನ್ನು ಪಸರಿಸಿದರು. ಸದಾನಂದರು 1911ರಲ್ಲಿ ಕೋಲ್ಕತದಲ್ಲಿ ನಿಧನರಾದರು ಎಂದು ತಿಳಿದುಬಂದಿದೆ.