

ಹಿಂದೂ ಧರ್ಮದಲ್ಲಿ ದೀನದಲಿತರ ಶೋಷಣೆಯ ಅಪರಾಧಿಗಳೆಂದರೆ ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂಬ ನಾನಾ ಹಿಂಸಾದಾಯಕವಾದ ಸಿದ್ಧಾಂತಗಳನ್ನು ಸೃಷ್ಟಿಸಿದ ಕಪಟಿಗಳಾದ ಮತ್ತು ಆಷಾಢಭೂತಿಗಳಾದ ಕರ್ಮಠರು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.
ಅಂದರೆ ಧರ್ಮದ ಸೋಗನ್ನು ಹಾಕಿಕೊಂಡು, ಸ್ವಾರ್ಥದ ಪ್ರಯೋಜನಕ್ಕಾಗಿ ಜನರನ್ನು, ಅವರ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತುಳಿತಕ್ಕೊಳಗಾದವರ ದುಃಸ್ಥಿತಿಯನ್ನು ಕಂಡು ಮರುಗುತ್ತಾ ನಮ್ಮ ಯುವ ಪೀಳಿಗೆಯನ್ನು ತಮ್ಮ ಮಾತುಗಳಿಂದ ಹೀಗೆ ಎಚ್ಚರಿಸುತ್ತಾರೆ. ‘ಸಾಧು ಸ್ವಭಾವದವರು, ದೀನದಲಿತರು, ನಮ್ರರು, ಪ್ರಾಮಾಣಿಕರೂ ಆದ ನಿಮ್ಮಂಥವರಲ್ಲಿ ನನಗೆ ವಿಶ್ವಾಸ... ಚಳಿಯಿಂದ, ಹಸಿವೆಯಿಂದ ನಾನು ಈ ನಾಡಿನಲ್ಲಿ ಸಾಯಬಹುದು. ತರುಣರೇ, ಏನೂ ಅರಿಯದವರನ್ನು, ದೀನ-ದಲಿತರನ್ನು ಮೇಲಕ್ಕೆ ತರುವ, ಎದೆ ಕರಗುವ ಮರುಕ!
ಇದೇ ನಾನು ನಿಮಗೆ ಬಿಡುವ ಆಸ್ತಿ. ಪ್ರತಿದಿನವೂ ಇನ್ನೂ ಅಧಃಪತನಕ್ಕೆ ಇಳಿಯುತ್ತಿರುವ ಮೂವತ್ತು ಕೋಟಿ ಮಾನವರ ಉದ್ಧಾರಕ್ಕೆ ನಿಮ್ಮ ಇಡೀ ಜೀವನಗಳನ್ನು ಮುಡಿಪಾಗಿಡುವ ಶಪಥ ಮಾಡಿ, ಬದ್ಧಕಂಕಣರಾಗಿ’ ಎಂದು ಯುವ ಜನಾಂಗಕ್ಕೆ ಕರೆಯನ್ನು ನೀಡುತ್ತಾರೆ. ಸ್ವಾಮಿ ವಿವೇಕಾನಂದರು ಉಪದೇಶಿಸಿದ ಮಾನವತಾವಾದದ ಕುರಿತು ಎಲ್ಲಾ ವೀಲರ್ ವಿಲ್ಫಾಕ್ ಎಂಬವರು ಪತ್ರಿಕೆಗೆ ಬರೆದ ಲೇಖನದಲ್ಲಿ ಹೀಗೆ ಹೇಳಿಕೊಳ್ಳುತ್ತಾರೆ: ಹನ್ನೆರಡು ವರ್ಷಗಳ ಹಿಂದಿನ ಒಂದು ಸಂಜೆ ನಾನು ಭಾರತದಿಂದ ಬಂದಿದ್ದ ತತ್ವಬೋಧಕರೊಬ್ಬರ ಭಾಷಣವನ್ನು ಕೇಳಲು ಹೋಗಿದ್ದೆ. ಅವರ ಹೆಸರು ವಿವೇಕಾನಂದ.
ಅವರು ನನ್ನ ಊರಾದ ನ್ಯೂಯಾರ್ಕ್ನಲ್ಲಿ ಭಾಷಣ ಮಾಡುವವರಿದ್ದರು. ನಾನು ಮತ್ತು ನನ್ನ ಪತಿ ಕುತೂಹಲದಿಂದ ಭಾಷಣ ಕೇಳಲು ಹೋದೆವು. ಹತ್ತು ನಿಮಿಷಗಳ ಕಾಲ ಕೇಳುಗರ ಮಧ್ಯೆ ಇದ್ದೆವಷ್ಟೆ, ನಾವು ಯಾವುದೋ ಅದ್ಭುತ, ಪ್ರಾಣದಾಯಕ, ಅತೀಂದ್ರಿಯ ವಾತಾವರಣಕ್ಕೆ ಒಯ್ಯಲ್ಪಟ್ಟೆವು. ಆ ಭಾಷಣ ಮುಗಿದ ಮೇಲೆ, ನಾವು ಹೊಸ ಧೈರ್ಯ, ಹೊಸ ನಂಬಿಕೆ, ಹೊಸ ಶಕ್ತಿ, ಹೊಸ ಶ್ರದ್ಧೆಗಳೊಡನೆ ದಿನನಿತ್ಯದ ಜಂಜಾಟಗಳನ್ನು ಎದುರಿಸಲು ಸಿದ್ಧರಾಗಿ ತೆರಳಿದೆವು.