

ಹೊಸದುರ್ಗ: ತಾಲೂಕಿನ ಬಾಗೂರು ಗ್ರಾಮದ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ನಾಮದೇವಿ ಸಿಂಪಿ ಸಮಾಜ ಆಯೋಜಿಸಿದ್ದ 76ನೇ ವರ್ಷದ ದಿಂಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಮೂರು ದಿನಗಳ ಕಾಲ ನಡೆದ ಉತ್ಸವದ ಪೂರ್ವಭಾವಿಯಾಗಿ ಕಳೆದ ಭಾನುವಾರ ದೇವಾಲಯದಲ್ಲಿ ಪೋತಿ ಸ್ಥಾಪನೆ, ಭಜನೆ, ವೀಣಾ ಜಾಗರಣೆ ಕಾರ್ಯಕ್ರಮ ನಡೆಯಿತು.
ಸೋಮವಾರ ಏಕಾದಶಿ ಅಂಗವಾಗಿ ವಿಠ್ಠಲ ರುಕುಮಾಯಿಯ ಮೂಲ ವಿಗ್ರಹಕ್ಕೆ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇವೆಗಳು ನಡೆದವು.
ಮಂಗಳವಾರ ದಿಂಡಿ ಉತ್ಸವದ ಪ್ರಮುಖ ಕಾರ್ಯಕ್ರಮಗಳು ನೆರವೇರಿದವು. ಭದ್ರಾವತಿಯ ಬಸಪ್ಪ ಮಾಸ್ತರ್ ನೇತೃತ್ವದಲ್ಲಿ ಪಂಢರಿ ಸಂಪ್ರದಾಯ ಭಜನೆ ಹಾಗೂ ಪರಸ್ಥಳ ಭಜನಾ ಮಂಡಳಿಯವರಿಂದ ಪಾವುಲ್ ಭಜನೆ, ಪಾಳಿ ಭಜನೆ, ಭಾರೋಡ ಹಾಗೂ ಗೌಳಿ ಭಜನೆ ನಡೆಸಲಾಯಿತು.
ಬೆಳಗ್ಗೆ ದೇವಾಲಯದಲ್ಲಿ ಕಾಕಡಾರತಿ ಸೇವೆ ನೆರವೇರಿಸಿದ ನಂತರ ಪಾಂಡುರಂಗ ರುಕುಮಾಯಿ ದೇವತೆಗಳ ಉತ್ಸವ ಮೂರ್ತಿಗಳ ರಾಜ ಬೀದಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾಂಪ್ರದಾಯಿಕ ಕಲಾ ಕಿರ್ತನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು. ರಾಜ್ಯದ ವಿವಿಧೆಡೆಯಿಂದ ದಿಂಡಿ ಉತ್ಸವಕ್ಕೆ ಆಗಮಿಸಿದ ಭಕ್ತರು ವೀಣಾ, ತಾಳ, ಬಾಳ ಹಾಗೂ ಗೋಪಾಳಗಳೊಂದಿಗೆ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನನ್ನು ಪ್ರಾರ್ಥಿಸಿದರು.
ಅಖಿಲ ಭಾರತ ಭಾವಸಾರ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ್, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹನುಮಂತರಾವ್, ಪಾಂಡುರಂಗ, ಶಾಂತರಾವ್, ರಾಜು ಹೋವಳೆ, ಸಂಜು ಹೋವಳೆ ಇತರರು ಪಾಲ್ಗೊಂಡಿದ್ದರು.