ವಿಐಎಸ್‌ಎಲ್ ಉಳಿಸುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

17 smg 6
Published on

ಶಿವಮೊಗ್ಗ: ಭದ್ರಾವತಿ ವಿಐಎಸ್‌ಎಲ್ ಉಳಿಸುವಂತೆ ಒತ್ತಾಯಿಸಿ ವಿಐಎಸ್‌ಪಿ ಗುತ್ತಿಗೆ ನೌಕರರ ಸಂಘ ಮತ್ತು ವಿಐಎಸ್‌ಎಲ್ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಪ್ರಮುಖರು ಶುಕ್ರವಾರ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಅಶೋಕ ವೃತ್ತದಿಂದ ಬಿ.ಎಚ್.ರಸ್ತೆ, ಅಮೀರ್ ಅಹಮ್ಮದ್ ವೃತ್ತ, ನೆಹರು ಮಾರ್ಗ, ಗೋಪಿ ವೃತ್ತ, ಬಾಲರಾಜ್ ಅರಸು ರಸ್ತೆ, ಮಹಾವೀರ ವೃತ್ತದ ಮಾರ್ಗವಾಗಿ ಡಿಸಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ವಿಐಎಸ್‌ಎಲ್ ಕರ್ನಾಟಕದ ಆಸ್ತಿ, ಕಾರ್ಖಾನೆ ಉಳಿದರೆ ಭದ್ರಾವತಿ ಉಳಿಯಲಿದೆ. ಸ್ವಾಭಿಮಾನದ ಸಂಕೇತವಾಗಿದ್ದು, ವಿಐಎಸ್‌ಎಲ್ ಉಳಿಸಿ ಭದ್ರಾವತಿ ಬೆಳೆಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಸೈಲ್ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ವಿಐಎಸ್‌ಎಲ್ ಮುಚ್ಚುವ ತೀರ್ಮಾನ ಕೈಗೊಂಡಿವೆ. ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚಬಾರದು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಅನ್ನ ನೀಡುತ್ತಿರುವ ಕಾರ್ಖಾನೆ ಮುಚ್ಚುವುದರಿಂದ ಎಲ್ಲರ ಬದುಕು ಬೀದಿಗೆ ಬೀಳಲಿದೆ ಎಂದು ಅಳಲು ತೋಡಿಕೊಂಡರು.

1918ರಲ್ಲಿ ಸ್ಥಾಪನೆಯಾದ ಕಾರ್ಖಾನೆ ನೂರು ವರ್ಷದ ಇತಿಹಾಸವನ್ನು ಹೊಂದಿದೆ. ಏಷ್ಯಾ ಖಂಡದಲ್ಲಿಯೇ ಅತ್ಯಂತ ಪ್ರಖ್ಯಾತಿ ಪಡೆದಿದ್ದ ಕಾರ್ಖಾನೆಯಲ್ಲಿ ದೇಶಕ್ಕೆ ಅಗತ್ಯವಿರುವ ಎಲ್ಲ ರೀತಿಯ ಉಕ್ಕು ಮತ್ತು ಕಬ್ಬಿಣವನ್ನು ತಯಾರಿಸಲಾಗುತ್ತಿತ್ತು. 2015 ಮತ್ತು 2018ರಲ್ಲಿ ಕೇಂದ್ರ ಸರ್ಕಾರದ ಉಕ್ಕು ಸಚಿವರು ಭದ್ರಾವತಿಗೆ ಭೇಟಿ ನೀಡಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಕೆಲ ಆಂತರಿಕ, ರಾಜಕೀಯ ಮತ್ತು ಆಡಳಿತ ಮಂಡಳಿ ಇಚ್ಛಾಶಕ್ತಿ ಕೊರತೆಯಿಂದ ಬಂಡವಾಳ ಹೂಡಿಕೆಗೆ ಕೊಟ್ಟಿದ್ದ ಭರವಸೆ ಸುಳ್ಳಾಯಿತು ಎಂದು ದೂರಿದರು.

ಯಾವುದೇ ಬಂಡವಾಳ ಹೂಡಿಕೆ ಮಾಡದೇ ನಷ್ಟದ ನೆಪವೊಡ್ಡಿ ಇದೀಗ ಕಾರ್ಖಾನೆ ಮುಚ್ಚಲು ಹೊರಟಿರುವುದು ಸರಿಯಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೈಲ್ ಮತ್ತು ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಹೋರಾಡಿ ಕಾರ್ಖಾನೆ ಉಳಿಸಿಕೊಳ್ಳದಿದ್ದಲ್ಲಿ ನಮ್ಮ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ವಿವಿಧ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು, ಸ್ತ್ರೀಶಕ್ತಿ ಸಂಘಟನೆಗಳು, ರೈತ ಸಂಘಟನೆ ಮುಖಂಡರು, ಕಟ್ಟಡ ಕಾರ್ಮಿಕರು, ವಕೀಲರು, ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗೂ ಭದ್ರಾವತಿಯ ಸಾರ್ವಜನಿಕರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net