

ಶಿವಮೊಗ್ಗ: ವಿಐಎಸ್‌ಎಲ್ ವಿಷಯದಲ್ಲಿ ನಾನಿನ್ನೂ ಕೈಕಟ್ಟಿ ಕುಳಿತಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ಬೇರೆ ಮಾರ್ಗಗಳನ್ನೂ ಹುಡುಕುವ ಪ್ರಯತ್ನ ನಡೆಸಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶೀಘ್ರವೇ ರಾಜ್ಯ ನಾಯಕರ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವೊಲಿಕೆ ಪ್ರಯತ್ನ ನಡೆಸುವುದಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.
ನಾನು ಲೋಕಸಭಾ ಸದಸ್ಯನಾದ ಬಳಿಕ ವಿಐಎಸ್‌ಎಲ್ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ. ನನ್ನ ಪ್ರಮಾಣಿಕ ಪ್ರಯತ್ನಗಳು ಅಲ್ಲಿನ ಕಾರ್ಮಿಕರಿಗೂ ತಿಳಿದಿದೆ. ಕಾರ್ಖಾನೆ ಮುಚ್ಚುವ ಕೇಂದ್ರದ ನಿರ್ಧಾರವನ್ನು ರಾಜಕೀಯಗೊಳಿಸುವ ಪ್ರಯತ್ನ ಸಲ್ಲದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಹಲವು ವರ್ಷಗಳಿಂದ ವಿಐಎಸ್‌ಎಲ್ ಹಾಗೂ ಎಂಪಿಎಂ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇವುಗಳನ್ನು ಉಳಿಸಿಕೊಳ್ಳಲು ಕೇಂದ್ರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹಾಗೂ ನಮ್ಮ ಸಂಘಟನೆ ನಿರಂತರ ಪ್ರಯತ್ನ ಮಾಡಿದೆ. ವಿಐಎಸ್‌ಎಲ್ ನಿರ್ವಹಣೆ ಸಾಧ್ಯವಾಗದೇ ಅಂದಿನ ಸರ್ಕಾರ ಎಸ್‌ಎಐಎಲ್‌ಗೆ ಅಂದಿನ ಸರ್ಕಾರ ಹಸ್ತಾಂತರ ಮಾಡಿತ್ತು. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದಿವೆ ಎಂದರು.
ಕಾರ್ಖಾನೆಯ ನಷ್ಟ ಹೆಚ್ಚಿದಂತೆ ಕೇಂದ್ರ ಸರ್ಕಾರ ಹೆಜ್ಜೆ ಇಂದಿರಿಸಿತು. 2013ರಲ್ಲಿ ಅಂದಿನ ಯುಪಿಎ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಮುನ್ನಡೆಸಲು ತೀರ್ಮಾನಿಸಿತ್ತು. ಆದರೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತೀರ್ಮಾನ ಕೈ ಬಿಟ್ಟಿತ್ತು. ಇಂದಿನ ಸ್ಥಿತಿ ನಿಜಕ್ಕೂ ವಿಷಾಧನೀಯ ಎಂದು ಹೇಳಿದರು.
ಕೇಂದ್ರ ಸರ್ಕಾರ 2019ರ ಜುಲೈನಲ್ಲಿ ಖಾಸಗಿ ಕಂಪನಿಗಳಿಂದ ಬಿಡ್ ಆಹ್ವಾನಿಸಿತ್ತು. ಅನೇಕ ಬಾರಿ ಬಿಡ್ ಕರೆದರೂ ಯಾರೂ ಆಸಕ್ತಿ ತೋರಲಿಲ್ಲ. 2022ರವರೆಗೆ ಅನೇಕ ಪ್ರಕ್ರಿಯೆಗಳು ನಡೆದು ಮುಚ್ಚುವ ತೀರ್ಮಾನ ಮಾಡಲಾಯಿತು. ಆದರೆ ಇನ್ನೂ ಕೇಂದ್ರದ ಅಧಿಕೃತ ಆದೇಶ ಬಂದಿಲ್ಲ. ಅದರಲ್ಲಿ ಯಾವ ನಿಬಂಧನೆಗಳು ಇವೆಯೋ ಗೊತ್ತಿಲ್ಲ. ಎಲ್ಲವನ್ನೂ ಗಮನಿಸಿ ಸೂಕ್ತ ಮಾರ್ಗ ಕಂಡುಕೊಳ್ಳಲಾಗುವುದು. ನಷ್ಟದಲ್ಲಿದ್ದ ಕಾರ್ಖಾನೆಗೆ ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಫಲವಾಗಿ ಎರಡು ವರ್ಷ ತಲಾ 87 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿತ್ತು ಎಂದು ತಿಳಿಸಿದರು.