

Manipur Visit: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಜನಾಂಗೀಯ ಹಿಂಸಾಚಾದಿಂದ ಅನೇಕ ಸಾವು-ನೋವು ನಡೆದಿದ್ದು, ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 13 ರಂದು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಅವರಿಗೆ ಸ್ವಾಗತ ಕೋರುವುದಕ್ಕೆ ಮಣಿಪುರದ ಕುಕಿ-ಝೋ ಸಮುದಾಯವನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳು ಬುಧವಾರ (ಸೆ. 10) ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.
ಪ್ರಧಾನಿ ಭೇಟಿ ಕುರಿತಂತೆ ಹಲವು ಸಂಘಟನೆಗಳ ಪ್ರತಿಕ್ರಿಯಿಸಿದ್ದು, ಪ್ರಧಾನಿಯವರು ಬೃಹತ್ ಸಮಾರಂಭದಲ್ಲಿ ಭಾಗವಹಿಸುವ ಬದಲು, ಹಿಂಸಾಚಾರದಿಂದ ನಲುಗಿ ನಿರಾಶ್ರಿತರ ಶಿಬಿರಗಳಲ್ಲಿರುವ ಬಾಧಿತರನ್ನು ಭೇಟಿಯಾಗಬೇಕು ಎಂದು ಒತ್ತಾಯಿಸಿವೆ.
ಚುರಾಚಂದ್‌ಪುರ ಜಿಲ್ಲೆಯ ಗ್ಯಾಂಗ್ಟೆ ವಿದ್ಯಾರ್ಥಿ ಸಂಘಟನೆಯು ಪ್ರಧಾನಿಯವರ ಸಂಭಾವ್ಯ ಭೇಟಿಯನ್ನು ಸ್ವಾಗತಿಸುವುದಾಗಿ ಹೇಳಿದ್ದು, ಆದರೆ "ನಾವು ನಮ್ಮ ಕಣ್ಣುಗಳಲ್ಲಿ ಕಣ್ಣೀರಿನೊಂದಿಗೆ ನೃತ್ಯ ಮಾಡಲು ಸಾಧ್ಯವಿಲ್ಲ, ನಮ್ಮ ಶೋಕ ಇನ್ನೂ ಮುಗಿದಿಲ್ಲ, ನಮ್ಮ ಕಣ್ಣೀರು ಇನ್ನೂ ಒಣಗಿಲ್ಲ, ನಮ್ಮ ಗಾಯಗಳು ಇನ್ನೂ ವಾಸಿಯಾಗಿಲ್ಲ, ನಾವು ಸಂತೋಷದಿಂದ ನೃತ್ಯ ಮಾಡಲು ಸಾಧ್ಯವಿಲ್ಲ. ಭವ್ಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸುವ ಬದಲು, ಪ್ರಧಾನಿಯವರು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಸ್ಥಳಾಂತರಗೊಂಡ ಜನರೊಂದಿಗೆ ಸಂವಹನ ನಡೆಸಬೇಕು" ಎಂದು ಹೇಳಿದೆ.
ಕುಕಿ ಸಮುದಾಯದ ಸರ್ವೋಚ್ಚ ಸಂಸ್ಥೆಯಾದ ಕುಕಿ ಇನ್ಪಿ ಮಣಿಪುರ, ಪ್ರಧಾನ ಮಂತ್ರಿಯವರನ್ನು ರಾಜ್ಯದಲ್ಲಿ ಸ್ವಾಗತಿಸಬೇಕು, ಆದರೆ ಈ ಭೇಟಿಯು "ಕುಕಿ-ಝೋ ಜನರ ಸಾಮೂಹಿಕ ಆಕಾಂಕ್ಷೆಗಳಿಗೆ ನ್ಯಾಯ ಮತ್ತು ಮನ್ನಣೆಯನ್ನು ನೀಡುವಂತಿರಬೇಕು" ಎಂದು ತಿಳಿಸಿದೆ.
ಮೈತೆಯಿ ಬಹುಸಂಖ್ಯಾತ ಇಂಫಾಲ್ ಕಣಿವೆಯ ಒಂದು ವರ್ಗದ ಜನರು, ತಮ್ಮ ಕಷ್ಟಗಳನ್ನು ವ್ಯಕ್ತಪಡಿಸಲು ಪ್ರಧಾನಿಯವರ ಭೇಟಿಯನ್ನು ಒಂದು ಅವಕಾಶವೆಂದು ಪರಿಗಣಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರಧಾನಿಯವರ ಉಪಸ್ಥಿತಿಯು ದೀರ್ಘಕಾಲದ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಮತ್ತು ಜನಾಂಗೀಯ ಕಲಹದಿಂದ ಮುಗ್ಧ ಗ್ರಾಮಸ್ಥರು ಹೇಗೆ ಪ್ರಭಾವಿತರಾಗಿದ್ದಾರೆ ಎಂಬುದನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ" ಎಂದು ಇಂಫಾಲ್ ಪೂರ್ವ ಜಿಲ್ಲೆಯ ಗ್ರಾಮಸ್ಥ ಸೋಯಿಬಮ್ ರೇಗನ್ ಹೇಳಿದ್ದಾರೆ.
ಮೇ 2023 ರಿಂದ ಮೈತೈ ಮತ್ತು ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರವು ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ. 2027 ರವರೆಗೆ ಅಧಿಕಾರಾವಧಿ ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ. (ಏಜೆನ್ಸೀಸ್)