ಉದ್ಯಮಿ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ; 2,929 ಕೋಟಿ ರೂ. ಬ್ಯಾಂಕ್ ವಂಚನೆಗೆ ಸಂಬಂಧಿಸಿ ಕೇಸ್ ದಾಖಲಿಸಿಕೊಂಡ ಇ.ಡಿ| Anil Ambani

Anil Ambani
Published on

Anil Ambani: ಭಾರತೀಯ ಪ್ರಮುಖ ಉದ್ಯಮಿ ರಿಲಯನ್ಸ್ ಗ್ರೂಪ್ಸ್ ಚೇರಮನ್​ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಎಸ್​ಬಿಐನ 2,929 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡಿದೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಇತರರ ವಿರುದ್ಧ 2,929 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹೊಸ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ನಷ್ಟ ಉಂಟುಮಾಡಿದ್ದಾರೆ ಎಂದು ಸಿಬಿಐ, ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಮೇಲೆ ಆರೋಪ ಹೊರಿಸಿತ್ತು ಮತ್ತು ರಿಲಯನ್ಸ್ ಗ್ರೂಪ್ ಅಧ್ಯಕ್ಷರಿಗೆ ಸಂಬಂಧಿಸಿದ ಆವರಣಗಳಲ್ಲಿಯೂ ಶೋಧ ನಡೆಸಿತ್ತು. ಬ್ಯಾಂಕ್ ಹಣವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಸಾಲಗಳನ್ನು ಬೇರೆಡೆಗೆ ತಿರುಗಿಸಲಾಗಿದೆಯೇ ಎಂಬುದನ್ನು ಸ್ಥಾಪಿಸಲು ಪುರಾವೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಶೋದ ನಡೆಸಿತ್ತು.

ಜೂನ್ 13 ರಂದು ಎಸ್‌ಬಿಐ, ರಿಲಯನ್ಸ್​ ಕಮ್ಯೂನಿಕೇಷನ್ಸ್​ ಮತ್ತು ಅಂಬಾನಿಯನ್ನು "ವಂಚಕರು" ಎಂದು ವರ್ಗೀಕರಿಸಿ ಜೂನ್ 24 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ವರದಿಯನ್ನು ಕಳುಹಿಸಿತ್ತು.

ಹಾಗೆಯೇ ರಿಲಯನ್ಸ್​ ಕಮ್ಯೂನಿಕೇಷನ್ಸ್​ ಪತ್ರ ಬರೆದಿದ್ದ ಎಸ್​ಬಿಐ, "ನಮ್ಮ ಶೋಕಾಸ್ ನೋಟಿಸ್‌ಗೆ ಬಂದ ಪ್ರತಿಕ್ರಿಯೆಗಳನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಅದನ್ನು ಸರಿಯಾಗಿ ಪರಿಶೀಲಿಸಿದ ನಂತರ, ಸಾಲದ ದಾಖಲೆಗಳ ಒಪ್ಪಿದ ನಿಯಮಗಳು, ಷರತ್ತುಗಳನ್ನು ಪಾಲಿಸದಿರುವಿಕೆ ಅಥವಾ ಆರ್‌ಸಿಎಲ್ (ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್) ಖಾತೆಯ ನಡವಳಿಕೆಯಲ್ಲಿ ಕಂಡುಬಂದ ಅಕ್ರಮಗಳನ್ನು ಬ್ಯಾಂಕಿನ ತೃಪ್ತಿಗೆ ವಿವರಿಸಲು ಪ್ರತಿವಾದಿಯು ಸಾಕಷ್ಟು ಕಾರಣಗಳನ್ನು ಒದಗಿಸಿಲ್ಲ ಎಂದು ತೀರ್ಮಾನಿಸಲಾಗಿದೆ" ಎಂದು ತಿಳಿಸಿತ್ತು.

2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕ್, ರಿಲಯನ್ಸ್ ಗ್ರೂಪ್ ಕಂಪನಿಗಳಿಗೆ ನೀಡಿದ ಸುಮಾರು 3,000 ಕೋಟಿ ರೂ. ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪದ ಬಗ್ಗೆಯೂ ಏಜೆನ್ಸಿ ತನಿಖೆ ನಡೆಸುತ್ತಿದೆ. ಸಾಲಗಳನ್ನು ಮಂಜೂರು ಮಾಡುವ ಮೊದಲು ಬ್ಯಾಂಕಿನ ಪ್ರವರ್ತಕರು ಸಹ ಪಾವತಿಗಳನ್ನು ಸ್ವೀಕರಿಸಿದ್ದಾರೆ ಎಂದು ಅದು ಕಂಡುಕೊಂಡಿತ್ತು, ಇದು ಕ್ವಿಡ್ ಪ್ರೊ ಕ್ವೋ ವ್ಯವಸ್ಥೆಯನ್ನು ಸೂಚಿಸುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net