

ಬೆಂಗಳೂರು: ಭಾರತ ಚುನಾವಣಾ ಆಯೋಗದ ಆಹ್ವಾನದ ಮೇರೆಗೆ ಐದು ರಾಷ್ಟ್ರದ ಚುನಾವಣಾ ಮುಖ್ಯ ಆಯುಕ್ತರು/ಆಯುಕ್ತರು ಭಾನುವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗ 23 ದೇಶಗಳ ಜಾಗತಿಕ ಚುನಾವಣಾ ನಿರ್ವಹಣಾ ಸಂಸ್ಥೆಗಳಿಂದ 75 ಅಂತರರಾಷ್ಟ್ರೀಯ ಸಂದರ್ಶಕರು ವಿಶ್ವದ ಅತಿದೊಡ್ಡ ಚುನಾವಣೆಗಳು ನಡೆಯುವುದನ್ನು ವೀಕ್ಷಿಸಲು ಆಗಮಿಸಲಿದ್ದಾರೆ.
ಈ ಪೈಕಿ ಮಾಲ್ಡೋವಾ, ಟುನೀಶಿಯಾ, ನೇಪಾಳ, ಕಾಂಬೋಡಿಯಾ ಮತ್ತು ಸೆಶೆಲ್ಸ್, ರಾಷ್ಟ್ರಗಳ ಮುಖ್ಯ ಚುನಾವಣಾ ಆಯುಕ್ತರು, ಆಯುಕ್ತರು ಬೆಳಗಾವಿಗೆ ಭೇಟಿ ನೀಡಿ ಚುನಾವಣಾ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಪರಿವೀಕ್ಷಣೆ ಮಾಡಲಿದ್ದಾರೆ.
ಭಾರತದ ಚುನಾವಣಾ ಆಯೋಗವು ಅತ್ಯುನ್ನತ ಮಾನದಂಡಗಳ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ತನ್ನ ಬದ್ಧತೆ ಮೆರೆದಿದೆ. ಅಲ್ಲದೆ, ಚುನಾವಣಾ ಸಮಗ್ರತೆ ಮತ್ತು ಪಾರದರ್ಶಕತೆ, ಪ್ರಜಾಸತ್ತಾತ್ಮಕ ಶ್ರೇಷ್ಠತೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಜಾಗತಿಕ ಚುನಾವಣಾ ನಿರ್ವಹಣಾ ಸಂಸ್ಥೆಗಳಿಗೆ (ಇಎಮ್‌ಬಿ) ಸೇತುಬಂಧ ನೀಡುತ್ತದೆ. 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಸಂದರ್ಶಕರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾರತದ ಚುನಾವಣಾ ಆಯೋಗವು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚುನಾವಣೆಯನ್ನು ಐದು ರಾಷ್ಟ್ರಗಳ ಚುನಾವಣಾ ಆಯೋಗಗಳ ಮುಖ್ಯಸ್ಥರು ವೀಕ್ಷಿಸಲಿದ್ದಾರೆ. ಸೋಮವಾರ ಮಸ್ಟರಿಂಗ್ ಮತ್ತು ಮಂಗಳವಾರ ಮತದಾನದ ವೀಕ್ಷಣೆ ಮಾಡಲಿದ್ದಾರೆ.