ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಕೂಡಲಸಂಗಮಕ್ಕೆ ಭೇಟಿ ಕೊಡಿ: ಶಿಕ್ಷಣ ಇಲಾಖೆ ಸೂಚನೆ

basava
Published on

ಬೆಂಗಳೂರು: 12ನೇ ಶತಮಾನದಲ್ಲಿ ಮೌಢ್ಯಗಳ ವಿರುದ್ಧ ಹೋರಾಡಿದ ಬಸವಣ್ಣನವರ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಶೈಕ್ಷಣಿಕ ಪ್ರವಾಸದಲ್ಲಿ ಕೂಡಲಸಂಗಮಕ್ಕೆ ಭೀಟಿ ನೀಡಲು ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಪ್ರಾಥಮಿಕ ಮತ್ತು ಪ್ರೌಢಾಶಾಲಾ ಮಕ್ಕಳಿಗೆ ಕೈಗೊಳ್ಳುವ ಶೈಕ್ಷಣಿಕ ಪ್ರವಾಸದಲ್ಲಿ ಕೂಡಲ ಸಂಗಮದ ಬಸವಶರಣ ಕಲಾ ಸಂಗ್ರಹಾಲಯ ವೀಕ್ಷಿಸುವಂತೆ ತಿಳಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಮತ್ತು ಹುನಗುಂದ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಅವರ ಪತ್ರವನ್ನು ಉಲ್ಲೇಖಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬಸವಣ್ಣನವರ ಐಕ್ಯಸ್ಥಳವಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ಬಸವಶರಣ ಕಲಾ ಸಂಗ್ರಹಾಳಯ, ಬಸವಣ್ಣನವರ ಜೀವನ ಮತ್ತು ವಚನವನ್ನು ಆಧರಿಸಿದ ಚಿತ್ರಗಳು, ಅನುಭವ ಮಂಟಪಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಇಲಾಖೆ ಸಚಿವರು ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ವಾರ್ಷಿಕ ಶೈಕ್ಷಣಿಕ ಪ್ರವಾಸವನ್ನು ಕಡ್ಡಾಯಗೊಳಿಸಿರುವುದಿಲ್ಲ. ಆದರೆ, ಶಾಲೆಗಳು ಐಚ್ಛಿಕವಾಗಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡ ಸಂದರ್ಭದಲ್ಲಿ ಕೂಡಲಸಂಗಮದ ‘ಬಸವಶರಣ ಕಲಾ ಸಂಗ್ರಹಾಲಯ’ವನ್ನು ಸಂದರ್ಶಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರೌಢ ಶಿಕ್ಷಣ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net