

ಕಡೂರು: ಶಿಲ್ಪಕಲೆಗಳು ಜಗತ್ತಿಗೆ ಪ್ರಸಿದ್ಧಿಯಾಗಲು ಅಮರಶಿಲ್ಪಿ ಜಕಣಾಚಾರಿ ಪಾತ್ರ ಹಿರಿದು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಲ್ಪಕಲೆಯನ್ನು ನಂಬಿರುವ ವಿಶ್ವಕರ್ಮರ ಜನಸಂಖ್ಯೆ ರಾಜ್ಯದಲ್ಲಿ ವಿರಳವಾಗಿದ್ದರೂ ಅವರ ಪಾತ್ರ ಹಿರಿದಾಗಿದೆ. ಆಧುನಿಕ ಯುಗದಲ್ಲಿ ಶಿಲ್ಪಕಲೆಗಳು ಇನ್ನೂ ಜೀವಂತವಾಗಿವೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ತವರಾಜ್ ಮಾತನಾಡಿ, ಸೋಮನಾಥಪುರ, ಹಳೇಬೀಡು, ಬೇಲೂರು ದೇವಾಲಯಗಳು ಇಂದಿಗೂ ವಿಶ್ವದ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಶಿಲ್ಪಿಗಳು ಯಂತ್ರಗಳ ಮೂಲಕ ಶಿಲ್ಪಗಳನ್ನು ತಯಾರಿಸುತ್ತಾರೆ. ಹಿಂದೆ ಕೆತ್ತನೆಯಿಂದಲೇ ನಿರ್ಮಿಸುವ ಪದ್ಧತಿ ಇತ್ತು. ವಿಶ್ವಕರ್ಮರು ಯಂತ್ರಗಳಾಗದೆ ಶಿಲ್ಪಿಗಳಾಗಿಯೇ ಉಳಿಯಬೇಕಿದೆ ಎಂದು ಸಲಹೆ ನೀಡಿದರು.
ವಿಶ್ವಕರ್ಮ ಸಮಾಜದ ಮುಖಂಡ ಓಂಕಾರ್‌ಮೂರ್ತಿ ಮಾತನಾಡಿ, ಜಕಣಾಚಾರಿ ಅವರು ಶಿಲ್ಪಕಲೆ ಮೂಲಕ ವಿಶ್ವದ ಗಮನ ಸೆಳೆಯುವ ಸೋಮನಾಥಪುರ, ಹಳೇಬೀಡು ಮತ್ತು ಬೇಲೂರು ದೇವಾಲಯಗಳನ್ನು ನಿರ್ಮಿಸಿದರು. ವಿಷ್ಣುವರ್ಧನ ಮಹಾರಾಜರು ಈ ದೇವಾಲಯಗಳ ನಿರ್ಮಾಣದ ಜವಾಬ್ದಾರಿಯನ್ನು ಜಕಣಾಚಾರಿಗೆ ನೀಡಿದ್ದರು. ಕೈದಾಳದಲ್ಲಿ ದೇವಾಲಯ ನಿರ್ಮಿಸಿ ರಾಜರಿಂದ ಅಮರಶಿಲ್ಪಿ ಎಂಬ ಬಿರುದನ್ನು ಪಡೆದರು. ವಿಶ್ವಕರ್ಮ ಸಮಾಜದವರಿಗೆ ಬೆಲೆ ತಂದುಕೊಟ್ಟವರು ಜಕಣಾಚಾರಿ. ವಿಶ್ವಕರ್ಮರು ಇಂದಿಗೂ ಎಲ್ಲಿಯೂ ಕೂಲಿ ಕೆಲಸ ಮಾಡದೆ ಶಿಲ್ಪಕಲೆಗಳನ್ನು ತಮ್ಮ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ ಎಂದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ತೀರ್ಥಾಚಾರ್, ಕಾರ್ಯದರ್ಶಿ ತಿಪ್ಪೇಶ್, ಸಮಾಜದ ಮುಖಂಡರಾದ ಗಿರಿಧರಮೂರ್ತಿ, ಮಹೇಶ್ವರಾಚಾರ್, ಸಿದ್ದೇಶ್ವರಾಚಾರ್, ಬಸವರಾಜ್ ಮತ್ತಿತರರಿದ್ದರು.