ದೇಗುಲಗಳಲ್ಲಿ ವಿಶ್ವಕರ್ಮ ಸಮಾಜದ ಕೌಶಲವಿದೆ

vishwakarma
ಕೊಪ್ಪದಲ್ಲಿ ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಸೇವಾ ಸಂಘದ ವಾರ್ಷಿಕೋತ್ಸವವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಕೃಷ್ಣಯ್ಯ ಆಚಾರ್ಯ, ನವೀನ್ ಆಚಾರ್ಯ ಇದ್ದರು.
Published on

ಕೊಪ್ಪ: ಪ್ರಾಚೀನ ದೇಗುಲಗಳಲ್ಲಿ ವಿಶ್ವಕರ್ಮ ಸಮಾಜದ ಕೌಶಲವನ್ನು ಜಗತ್ತು ನೋಡುತ್ತಿದೆ. ಜಗತ್ತಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಪುರಭವನದಲ್ಲಿ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಸೇವಾ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಪಂಚದ ಮೊದಲ ವಾಸ್ತುಶಿಲ್ಪಿಗಳು ವಿಶ್ವಕರ್ಮರು. ಇವರೇ ಕರ್ತೃಗಳು. ಸಮಾಜದವರನ್ನು ಬ್ರಹ್ಮನ ಮಗ ಎಂದೂ ಹೇಳಲಾಗುತ್ತದೆ. ಸೂರ್ಯನ ಏಳು ಕಿರಣಗಳಲ್ಲಿ ಒಂದು ಕಿರಣವನ್ನು ವಿಶ್ವಕರ್ಮ ಕಿರಣ ಎಂದು ಕರೆಯಲಾಗುತ್ತದೆ ಎಂದರು.
ವಿಶ್ವಕರ್ಮ ಸಮಾಜದವರು ಸ್ವಾಭಿಮಾನಿಗಳು. ಕೇಳಿ ಪಡೆದವರಲ್ಲ. ರಾಜಕಾರಣದಲ್ಲಿ ಇಂದು ಕೇಳಿ ಪಡೆಯವಂತಹ ಕಾಲದಲ್ಲಿ ನಿಂತಿದ್ದೇವೆ. ಆದ್ದರಿಂದ ಈ ಸಮುದಾಯಕ್ಕೆ ಹೆಚ್ಚು ರಾಜಕೀಯ ಅವಕಾಶ ಸಿಗಬೇಕು ಎಂದರೆ ಕೇಳಿಯೇ ಪಡೆಯಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸಮಾಜದ ಅಭಿವೃದ್ಧಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಪಡೆದು ಸಮಾಜ ಮುಂದೆ ಬರಬೇಕು. ಇದಕ್ಕಾಗಿ ಹೆಚ್ಚು ಸಂಘಟಿತರಾಗಬೇಕು ಎಂದು ಆಶಿಸಿದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜ ಹೆಚ್ಚು ಮುಂದೆ ಬರಬೇಕು. ವಿಶ್ವಕರ್ಮ ಸಮುದಾಯದವರು ಒಗ್ಗೂಡಬೇಕು ಎಂದು ಸಲಹೆ ನೀಡಿದರು.
ಶಾಸಕ ರಾಜೇಗೌಡ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ಕೆ.ಲಿಂಗಪ್ಪ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ಜತೆಗೆ ಭಗವದ್ಗೀತೆ ಪುಸ್ತಕ ನೀಡಲಾಯಿತು.
ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ಯ, ಕೆ.ಆರ್.ಭಾಸ್ಕರ್ ಆಚಾರ್ಯ, ವಾಸುದೇವ ಆಚಾರ್ಯ, ಕಿಶೋರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net