

ಮಂಗಳೂರು: ಹಿಂದೂ ಸಮಾಜದ ಜಾಗೃತಿಗಾಗಿ ಬಜರಂಗದಳ ನೇತೃತ್ವದಲ್ಲಿ ಅಕ್ಟೋಬರ್ 9ರಂದು ಮಂಗಳೂರಿನಲ್ಲಿ ಬೃಹತ್ ಶೌರ್ಯ ಜಾಗರಣ ಸಮಾವೇಶ ನಡೆಯಲಿದೆ.
ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಪುತ್ತೂರಿನಿಂದ ಆಗಮಿಸುವ ಶೌರ್ಯ ಜಾಗರಣ ರಥವನ್ನು ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಅರ್ಕುಳದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ನಗರದ ಅಂಬೇಡ್ಕರ್ ವೃತ್ತದಿಂದ ಮಧ್ಯಾಹ್ನ 2.30 ಗಂಟೆಗೆ ಕದ್ರಿ ಮೈದಾನ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ವಿಹಿಂಪ, ಬಜರಂಗದಳ ಪ್ರಮುಖರು ಸೇರಿದಂತೆ ವಿವಿಧ ಗಣ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ಮಹಾಪುರುಷರ, ಶೌರ್ಯ ಪರಾಕ್ರಮಿಗಳ, ಬಲಿದಾನ ಮಾಡಿದ ವೀರರ ಸ್ತಬ್ಧಚಿತ್ರಗಳೊಂದಿಗೆ ಚೆಂಡೆ, ಕೊಂಬು ವಾದನದೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಸಂಜೆ 4.30ಕ್ಕೆ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿಹಿಂಪ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್ ಭಾಗವಹಿಸಲಿದ್ದು, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಮಾವೇಶಕ್ಕೆ 25 ಸಾವಿರ ಮಂದಿ ಯುವಜನತೆ ಹಾಗೂ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಮಂಗಳೂರಲ್ಲಿ 300 ಘಟಕ:
ಮಂಗಳೂರು ಮಹಾನಗರದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಬಜರಂಗದಳ ಘಟಕಗಳಿವೆ. ಇದನ್ನು 300 ಘಟಕ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೆ ದ.ಕ.ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಬಜರಂಗದಳ ಶಾಖೆ ತೆರೆಯಲಾಗುವುದು. ಲವ್ ಜಿಹಾದ್, ಮತಾಂತರ ಹಾಗೂ ಗೋಹತ್ಯೆ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದರು.
ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ, ಕಾರ್ಯದರ್ಶಿ ಭುಜಂಗ ಕುಲಾಲ್, ವಿಹಿಂಪ ಜಿಲ್ಲಾ ಸಂಯೋಜಕ ನವೀನ ಮೂಡುಶೆಡ್ಡೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.