

ಬೆಂಗಳೂರು: ಮುಂದಿನ ವರ್ಷ (2024) ಡಿಸೆಂಬರ್‌ನಲ್ಲಿ 3ನೇ ವಿಶ್ವಹವ್ಯಕ ಸಮ್ಮೇಳನ ಆಯೋಜಿಸಲಿದ್ದು, ಇದರ ಪೂರ್ವಭಾವಿಯಾಗಿ ಅಮೇರಿಕ, ಸಿಂಗಾಪುರ, ಇಂಗ್ಲೇಂಡ್ ಮುಂತಾದ ದೇಶಗಳಲ್ಲಿ ಪೂರ್ವಭಾವಿ ಸಮ್ಮೇಳನ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 80ನೇ ಸರ್ವಸದ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವಹವ್ಯಕ ಸಮ್ಮೇಳನದ ಪೂರ್ವಭಾವಿಯಾಗಿ ಹವ್ಯಕ ನ್ಯಾಯ ಸಮಾವೇಶ, ಹವ್ಯಕ ವಿದ್ಯಾರ್ಥಿ ಸಮಾವೇಶ, ಹವ್ಯಕ ಯುವಜನೋತ್ಸವ, ಹವ್ಯಕ ವೈದ್ಯ ಸಮ್ಮೇಳನ, ಹವ್ಯಕ ಶಿಕ್ಷಕರ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ, ಹವ್ಯಕ ಸಂಗೀತ ಉತ್ಸವ, ಹವ್ಯಕ ಯಕ್ಷಗಾನ ಉತ್ಸವ, ಹವ್ಯಕ ಕಲಾ ಉತ್ಸವ, ಹವ್ಯಕ ವೈದಿಕ ಸಮಾವೇಶ, ಗಾಯತ್ರೀ ಮಹೋತ್ಸವ, ಸಂಸ್ಕಾರೋತ್ಸವ, ಹವ್ಯಕ ಸಾಹಿತ್ಯ ಸಮ್ಮೇಳನ, ಹವ್ಯಕ ಭಾಷಾ ದಿನ, ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶ ಇತ್ಯಾದಿ ವರ್ಷಪೂರ್ತಿ ನಡೆಸುವ ಮೂಲಕ ಸಮಾಜವನ್ನು ಜಾಗೃತಗೊಳಿಸಲಾಗುವುದು ಎಂದರು.
ಜನಸಂಖ್ಯೆಯಲ್ಲಿ ಅತೀ ಚಿಕ್ಕ ಸಮಾಜವಾಗಿರುವ ಹವ್ಯಕ ಸಮಾಜ ಸಂಘಟಿತವಾದರೆ ಎಲ್ಲವನ್ನೂ ಸಾಧ್ಯವಾಗಿಸಬಹುದಾಗಿದೆ. ಆ ಮೂಲಕ ಸಮಾಜವನ್ನು ಸಶಕ್ತವಾಗಿಸಬೇಕಿದೆ ಎಂದು ಕರೆನೀಡಿದರು.
ಅಡಕೆ ಎಲೆಚುಕ್ಕಿ ರೋಗ: ಅಡಕೆ ಬೆಳೆ ಹವ್ಯಕರ ಪಾರಂಪರಿಕ ಕೃಷಿಯಾಗಿದ್ದು, ಪ್ರಸ್ತುತ ಅಡಕೆ ಎಲೆಚುಕ್ಕಿ ರೋಗ ಕೃಷಿಕರನ್ನು ಬಾಧಿಸುತ್ತಿದೆ. ಸಮಾಜದ ಕಷ್ಟಕ್ಕೆ ಮಹಾಸಭೆ ಸದಾ ಸ್ಪಂದಿಸಲಿದ್ದು, ಹವ್ಯಕ ಕೃಷಿಕರ ಸಮಾವೇಶ ಆಯೋಜಿಸಿ, ಕೃಷಿ ವಿಜ್ಞಾನಿಗಳ ಸಂವಾದ ನಡೆಸಿ ಸಮಕಾಲೀನ ಸವಾಲುಗಳಿಗೆ ಉತ್ತ ಕಂಡುಕೊಳ್ಳಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಭೂಮಿ ದಾನ: ಹವ್ಯಕ ಮಹಾಸಭೆಯ ಸಮಾಜಮುಖಿ ಕಾರ್ಯ ಗುರುತಿಸಿ ಮಂಜುನಾಥ ಬಿಲ್ಲವ ಅವರು ಭಟ್ಕಳ ಸಮೀಪ ದುರ್ಗಾಪರಮೇಶ್ವರೀ ದೇವಾಲಯ ಸಹಿತ ಒಂದು ಎಕರೆ ಜಾಗ ದಾನರೂಪದಲ್ಲಿ ನೀಡಿದ್ದು, ಇಲ್ಲಿ ಈ ಬಾರಿ ನವರಾತ್ರಿ ಉತ್ಸವ ಆಯೋಜಿಸಲಾಗುವುದು ಎಂದು ಹೇಳಿದರು.
ಸಭಾದ ನೂತನ ಪದಾಧಿಕಾರಿಗಳು ಹಾಗೂ ವಿವಿಧ ಪ್ರಾಂತಗಳ ನಿರ್ದೇಶಕರು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.