

ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌದ ಕೇಂದ್ರ ಹಜರತ್ಗಂಜ್ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್ ಬಚ್ಚನ್ ಹತ್ಯೆಯಾಗಿದ್ದಾರೆ.
ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದಾಗ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ರಂಜಿತ್ ಬಚ್ಚನ್ ಮೇಲೆ ಫೈರಿಂಗ್ ಮಾಡಿದ್ದಾರೆ. ತಲೆಗೆ ಗುರಿಯಾಗಿರಿಸಿಕೊಂಡು ಅನೇಕ ಬಾರಿ ಶೂಟ್ ಮಾಡಿದ್ದು, ಪರಿಣಾಮ ಬಚ್ಚನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಖನೌದ ಹಜರತ್ಗಂಜ್ನಲ್ಲಿರುವ ಸಿಡಿಆರ್ಐ ಕಟ್ಟಡ ಸಮೀಪದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಫೈರಿಂಗ್ನಲ್ಲಿ ಬಚ್ಚನ್ ಸಹೋದರನಿಗೂ ಗುಂಡು ತಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಜಿತ್ ಬಚ್ಚನ್ ಗೋರಖ್ಪುರದ ನಿವಾಸಿಯಾಗಿದ್ದರು.
ಈ ಬಗ್ಗೆ ಮಾತನಾಡಿರುವ ಲಖನೌ ಕೇಂದ್ರ ಡಿಸಿಪಿ ದಿನೇಶ್ ಸಿಂಗ್, ಮೃತದೇಹವನ್ನು ರಂಜಿತ್ ಬಚ್ಚನ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ತಂಡವೊಂದನ್ನು ರಚನೆ ಮಾಡಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)