

ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ದಿವಂಗತ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ಗುರುವಾರ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಇದರಿಂದ ಅಘಾತಕ್ಕೊಳಗಾಗಿರುವ ಅಭಿಮಾನಿಗಳು, ಸರ್ಕಾರ, ಪೊಲೀಸ್ ಮತ್ತು ಕನ್ನಡ ಚಲಚಿತ್ರ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆಯೇ ಈ ಘಟನೆ ಬೆಳಕಿಗೆ ಬಂದಿತ್ತು. ಆದರೆ ವಿಷ್ಣು ಕುಟುಂಬಸ್ಥರು ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇದೀಗ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ ಎಂದು ಅನಿರುದ್ಧ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಅಭಿಮಾನಿಗಳು ಯಾರೂ ಕೂಡ ದೂರ ಆಗಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕಿಸಿ, ಅಭಿಮಾನಿಗಳ ಆಸೆಯಂತೆ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ನಾನೂ ಸಹ ಸರ್ಕಾರದ ಬಳಿ ಮಾತನಾಡಲು ನಾವು ಸಿದ್ಧ ಎಂದು ಅನಿರುದ್ಧ್ ತಿಳಿಸಿದ್ದಾರೆ. ಬೆಂಗಳೂರಲ್ಲೇ ಅಪ್ಪಾವ್ರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2 ಕೋಟಿ ರೂ. ಹಣ ಕೊಟ್ಟಿತ್ತು. ಆದರೆ ಆ ಜಾಗ ಕೋರ್ಟ್ನಲ್ಲಿ ಇದ್ದ ಕಾರಣ ಸರ್ಕಾರಕ್ಕೆ ಜಾಗ ತೆಗೆದುಕೊಳ್ಳಲು ಆಗಲಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಅಭಿಮಾನ್ ಸ್ಟುಡಿಯೋ ಜಾಗವನ್ನ ಪಡಿಸಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಲಿಲ್ಲ ಆ ಕಾರಣದಿಂದ ನಾವು ಮೈಸೂರಿಗೆ ಹೋದೆವು ಎಂದಿದ್ದಾರೆ. ಅದು ಖಾಸಗಿ ಜಾಗ ಆಗಿದ್ದರೂ ಸಹ ಭಾವನಾತ್ಮಕವಾಗಿ ಸಮಾಧಿ ಇದ್ದ ಜಾಗ, ಅದು ಕನ್ನಡಿಗರ ಜಾಗವಾಗಿತ್ತು. ಏನೇ ಆದರೂ ಬಾಲಣ್ಣ ಅವರ ಮೇಲೆ ನಮಗೆ ತುಂಬಾ ಗೌರವ ಇದೆ ಎಂದು ಅನಿರುದ್ಧ್ ತಿಳಿಸಿದ್ದಾರೆ.
ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಎಂಬುದು ನಮಗೆ ಗೊತ್ತಿರಲಿಲ್ಲ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಸಂಸ್ಕಾರ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ ಎಂದು ಆ ಸಮಯದಲ್ಲಿ ಕುಮಾರಸ್ವಾಮಿ ನಮಗೆ ಹೇಳಿದ್ದರು. ಹಾಗಾಗಿ ನಾವು ಅದಕ್ಕೆ ಒಪ್ಪಿಕೊಂಡೆವು ಎಂದಿದ್ದಾರೆ.
(ಏಜೆನ್ಸೀಸ್)
ಸರ್ಕಾರ ಮೈಸೂರಿನಲ್ಲಿ 2.75 ಎಕ್ರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಿದೆ. ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ. ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.