

Vishnuvardhan: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡ ಚಿತ್ರರಂಗದ ದಿಗ್ಗಜ ನಟ, ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ ಕ್ರಮಕ್ಕೆ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಗಣ್ಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ನಟ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಅಧಿಕೃತ ಜಾಲತಾಣ ಖಾತೆಯಲ್ಲಿ ಭಾವುಕ ನುಡಿಯನ್ನು ಹಂಚಿಕೊಂಡಿದ್ದಾರೆ.
ವಿಷ್ಣುರ್ಧನ್ ಅವರ ಪುಣ್ಯಭೂಮಿ ನೆಲಸಮ ಆಗಿರೋದನ್ನ ರಾಘವೇಂದ್ರ ರಾಜ್‌ಕುಮಾರ್ ವಿರೋಧಿಸಿದ್ದಾರೆ. "ನಡೆದಿರೋ ಘಟನೆ ಕೇಳಿ ಮನಸ್ಸಿಗೆ ತುಂಬಾನೆ ಬೇಸರವಾಗಿದೆ. ಡಾಕ್ಟರ್ ವಿಷ್ಣುವರ್ಧನ್ ಸರ್ ಅವರಿಗೆ ಸರಿಯಾದ ಗೌರವ ಸಿಗಲೇಬೇಕು" ಅಂತಲೇ ಬರೆದುಕೊಂಡಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಡಾಕ್ಟರ್ ರಾಜ್‌ಕುಮಾರ್ ಅವರ ಒಂದು ಫೋಟೋವನ್ನು ಕೂಡ ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಷ್ಣುವರ್ಧನ್ ಮತ್ತು ರಾಜ್‌ಕುಮಾರ್ ಅವರ ವಿಶೇಷ ಅನಿಸೋ ಕ್ಷಣದ ಫೋಟೋ ಇದಾಗಿದೆ.
ಅಭಿಮಾನ್ ಸ್ಟುಡಿಯೋ ಹಾಗೂ ವಿಷ್ಣುವರ್ಧನ್ ಅಭಿಮಾನಿ ಸಂಘದ ನಡುವೆ ಸಮಾಧಿ ಸ್ಥಳದ ಕುರಿತಾಗಿ ವಾದ-ವಿವಾದ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ, ಹೈಕೋರ್ಟ್ ಸೂಚನೆ ಮೇರೆಗೆ ಸಮಾಧಿಯನ್ನು ತೆರವುಗೊಳಿಸಲಾಗಿದೆ.(ಏಜೆನ್ಸೀಸ್)