

ಹಗರೆ: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವನ್ನು ಹಗರೆಯಲ್ಲಿ ವಿಷ್ಣು ಅಭಿಮಾನಿಗಳು ಕೇಕ್ ಕತ್ತರಿಸಿ ಅನ್ನಸಂತರ್ಪಣೆ ಮಾಡುವ ಮೂಲಕ ಸಡಗರದಿಂದ ಆಚರಿಸಿದರು.
ಡಾ.ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಅವರ ಜನ್ಮದಿನದಂದು ಹಗರೆ ವೃತ್ತದಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ 75ನೇ ಜಯಂತ್ಯುತ್ಸವ ಆಚರಿಸಿದರು.
ಬಿಜೆಪಿ ಮುಖಂಡ ಡಿಶಾಂತ್ ಕುಮಾರ್ ಮಾತನಾಡಿ, ಇಂದು ನಮ್ಮೆಲ್ಲರಿಗೂ ಸಂಭ್ರಮದ ದಿನ. ಕಾರಣ ಸರ್ಕಾರ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಕನ್ನಡದ ಮೇರು ನಟನಾಗಿ ಜನಮನ್ನಣೆ ಗಳಿಸಿದ್ದ ವಿಷ್ಣುವರ್ಧನ್ ತಮ್ಮ 21ನೇ ವಯಸ್ಸಿನಲ್ಲಿಯೇ ತೆರೆಯ ಮೇಲೆ ಪದಾರ್ಪಣೆ ಮಾಡಿ ವೃತ್ತಿ ಜೀವನದಲ್ಲಿ 220ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮಗನಾಗಿದ್ದರು. ಇಂತಹವರ ಜಯಂತಿಯನ್ನು ಆಟೋ ಚಾಲಕರು ಅಭಿಮಾನದಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಹಗರೆ ಜೆಡಿಎಸ್ ಮುಖಂಡ ಕಾಂತರಾಜು ಮಾತನಾಡಿ, ನಮ್ಮೂರಿನಲ್ಲಿ ಯುವಕರು ಸೇರಿ ಸಂತೋಷದಿಂದ ಡಾ.ವಿಷ್ಣುವರ್ಧನ್ ಜನ್ಮದಿನಾಚರಣೆ ಆಚರಿಸುತ್ತಿದ್ದಾರೆ. ಇಂತಹ ಕನ್ನಡದ ನಟ ನಮಗೆಲ್ಲ ದೊರಕಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಗಳಾದ ಹಗರೆ ಆಟೋ ದೇವರಾಜ್, ಮಂಜುನಾಥ್, ಕಾಂತರಾಜು, ಓಂಕಾರ್, ನಟರಾಜ್, ಮೋಹನ್, ಚೇತು, ಮಧು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಆಟೋ ಚಾಲಕರ ಸಂಘದ ಸದಸ್ಯರು, ಹಗರೆ ಗ್ರಾಮಸ್ಥರು ಭಾಗವಹಿಸಿದ್ದರು.