

ನವದೆಹಲಿ: ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಯೋಗ ದಿನಾಚರಣೆಯನ್ನು ವರ್ಚುವಲ್ ಆಗಿ ಆಚರಿಸಲಾಗಿದೆ. ದೇಶ-ವಿದೇಶಗಳ ಹಲವೆಡೆ ಜನರು ಯೋಗಾಭ್ಯಾಸ ಮಾಡಿ ಆರನೇ ವಿಶ್ವ ಯೋಗ ದಿನಕ್ಕೆ ಸಾಕ್ಷಿಯಾದರು. ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರಿಂದ ಜನರು ತಂತಮ್ಮ ಮನೆಯಲ್ಲೇ ಕುಟುಂಬಸ್ಥ ರೊಂದಿಗೆ ಯೋಗ ಮಾಡಿದರು.
ಭಾನುವಾರ ಬೆಳಗ್ಗೆ 6.30ಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರಗಳನ್ನು ಮೀರಿದ ಏಕತೆಯ ಶಕ್ತಿಯಾಗಿ ಯೋಗ ಹೊರಹೊಮ್ಮಿದೆ ಎಂದರು. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಯೋಗದ ಅಗತ್ಯವನ್ನು ಜಗತ್ತು ಎಂದಿಗಿಂತಲೂ ಹೆಚ್ಚು ಅನುಭವಿಸುತ್ತಿದೆ. ಕರೊನಾ ಪ್ರಮುಖವಾಗಿ ಉಸಿರಾಟದ ಮೇಲೆ ಆಕ್ರಮಣ ಮಾಡುತ್ತದೆ. ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ ಕರೊನಾವನ್ನು ಸೋಲಿಸಬಹುದು. ಆ ಶಕ್ತಿ ಹೆಚ್ಚಿಸಲು ಯೋಗದಲ್ಲಿ ಹಲವಾರು ಆಸನಗಳಿವೆ ಎಂದು ತಿಳಿಸಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಕೇಂದ್ರ ಸಚಿವರು ಸೇರಿ ದೇಶದ ಹಲವು ಗಣ್ಯರು ತಂತಮ್ಮ ನಿವಾಸಗಳಲ್ಲೇ ಯೋಗ ಮಾಡಿ ಸರಳವಾಗಿ ಯೋಗ ದಿನ ಆಚರಿಸಿದರು. ಜಮ್ಮು-ಕಾಶ್ಮೀರದ ಲಡಾಖ್ ಗಡಿಯಲ್ಲಿ ಹಿಮಾವೃತ ಪರ್ವತಗಳ ಮೇಲೆ ಭಾರತ-ಟಿಬೆಟ್ ಗಡಿ ಪೊಲೀಸರು ಯೋಗ ಮಾಡಿದರು. ಮಣಿಪುರದ ಚಾಂಡೆಲ್ನಲ್ಲಿ ಅಸ್ಸಾಂ ರೈಫಲ್ಸ್ನ ಯೋಧರು ಯೋಗ ದಿನಾಚರಣೆ ಆಚರಿಸಿದರು. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಎದುರು ಅಲ್ಲಿನ ಅಧಿಕಾರಿಗಳು ಯೋಗ ಮಾಡಿ ಗಮನ ಸೆಳೆದರು.
ಯೋಗಾಭ್ಯಾಸ ಮಾಡುವವರಿಗೆ ಕರೊನಾ ವೈರಸ್ ತಗಲುವ ಸಾಧ್ಯತೆ ಕಡಿಮೆ. ವಿಶ್ವಾದ್ಯಂತ ಯೋಗಾಭ್ಯಾಸ ಕರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿ. | ಶ್ರೀಪಾದ್ ನಾಯಕ್ ಕೇಂದ್ರ ಆಯುಷ್ ಸಚಿವ ಜೂನಿಯರ್ ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಇನ್ಮುಂದೆ ದೈಹಿಕ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಶಿಕ್ಷಣ ಸಚಿವ ಸುರೇಶ್ಕುಮಾರ್ ಜತೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. | ಕೆ.ಎಸ್.ಈಶ್ವರಪ್ಪ ಸಚಿವ (ಶಿವಮೊಗ್ಗದಲ್ಲಿ) https://www.vijayavani.net/army-engineers-toil-72-hours-to-finish-galwan-bridge-that-triggered-india-china-face-off/