ವಿರಾಟಪುರ ವಿರಾಗಿ ಟ್ರೇಲರ್ ಬಿಡುಗಡೆ; ಹಾನಗಲ್ಲ ಕುಮಾರಸ್ವಾಮಿ ಜೀವನಾಧಾರಿತ ಸಿನಿಮಾ

Movie
Published on

ಬೆಂಗಳೂರು: ಬಿ.ಎಸ್. ಲಿಂಗದೇವರು ನಿರ್ದೇಶನದ ಹಾನಗಲ್ಲ ಕುಮಾರಸ್ವಾಮಿಗಳ ಜೀವನಾಧಾರಿತ ‘ವಿರಾಟಪುರ ವಿರಾಗಿ’ ಚಿತ್ರದ ಟ್ರೇಲರ್ ಗದಗದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಐದು ಸಾವಿರಕ್ಕೂ ಅಧಿಕ ಜನ ಸಾಕ್ಷಿಯಾಗಿದ್ದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಹಾನಗಲ್ಲ ಕುಮಾರಸ್ವಾಮಿಗಳ ಬಯೋಪಿಕ್ ಆಗಿರುವುದೇ ನಮ್ಮ ಹೆಮ್ಮೆ. ಈ ಚಿತ್ರವನ್ನು ನಾವೆಲ್ಲರೂ ಗೆಲ್ಲಿಸಬೇಕು. ಟ್ರೇಲರ್ ನೋಡಿದ ಮೇಲೆ ಸಿನಿಮಾ ನೋಡಬೇಕೆಂಬ ಕುತೂಹಲ ಇನ್ನೂ ಹೆಚ್ಚಾಗಿದೆ. ಅಪರೂಪದ ಸಿನಿಮಾ ಮಾಡಿರುವ ನಿರ್ದೇಶಕ ಲಿಂಗದೇವರು ಮತ್ತು ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ನಾವೆಲ್ಲರೂ ಋಣಿಯಾಗಿರಬೇಕು’ ಎಂದರು. ‘ವಿರಾಟಪುರ ವಿರಾಗಿ’ ಮೇಕಿಂಗ್ ಪುಸ್ತಕವನ್ನು ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ‘ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧಾರಿತ ಈ ಚಿತ್ರ ವೀಕ್ಷಿಸಿ, ಯುವಕರು ವರ್ತನೆ ತಿದ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ಚಿತ್ರಮಂದಿರದಲ್ಲಿ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದರು.

ನಿರ್ದೇಶಕ ಬಿ.ಎಸ್. ಲಿಂಗದೇವರು, ‘ಆಧುನಿಕ ಜಗತ್ತಿನಲ್ಲಿ ಧಾರ್ವಿುಕ, ಭಕ್ತಿಪ್ರಧಾನ ಸಿನಿಮಾಗಳನ್ನು ಜನರಿಗೆ ಮುಟ್ಟಿಸುವುದೇ ಸವಾಲಿನ ಕೆಲಸವಾಗಿದೆ. ಈ ಸಿನಿಮಾ ಆಗಲು ಅನೇಕ ಗುರುಗಳು, ಪಂಡಿತರು ಮಾರ್ಗದರ್ಶನ ಮಾಡಿದ್ದಾರೆ’ ಎಂದರು. ಬಳಿಕ ಅಲ್ಲಂ ವೀರಭದ್ರಪ್ಪ, ಚಿತ್ರಕ್ಕೆ ಸರ್ಕಾರದಿಂದ ತೆರಿಗೆ ವಿನಾಯಿತಿ ಜತೆಗೆ ಸಬ್ಸಿಡಿ ಕೊಡಿಸಲು ಸಚಿವ ಸಿ.ಸಿ. ಪಾಟೀಲರಿಗೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದೇಶ್ವರ ರಾಜಯೋಗೀಂದ್ರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಶಾಸಕ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ್, ನಟ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.

7000 ಕಿಲೋಮೀಟರ್ ಸುತ್ತಿಬಂದ ಆರು ರಥಗಳು!: ಕಳೆದ ಡಿ. 20ರಿಂದ ಆರು ರಥಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಟು 7000 ಕಿಮೀ ಪ್ರಯಾಣ ಮಾಡಿ, 400ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ಸುಮಾರು ಒಂದು ಕೋಟಿ ಜನರಿಗೆ ಜಾನಗಲ್ ಶ್ರೀಗಳು ಮತ್ತು ‘ವಿರಾಟಪುರ ವಿರಾಗಿ’ ಚಿತ್ರದ ಬಗ್ಗೆ ಜಾಗೃತಿ ಮೂಡಿಸಿ, ಜ. 1ರಂದು ಗದಗಕ್ಕೆ ಆಗಮಿಸಿದವು. ಆ ರಥಗಳನ್ನು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿದರು. ಜಾನಪದ ವಾದ್ಯ, ಕಲಾಮೇಳಗಳ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net